

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕಾರ್ಗಿಲ್ ಯುದ್ಧ ಭಾರತದ ಪ್ರತಿ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಭಾರತೀಯರಲ್ಲಿ ದೇಶ ಪ್ರೇಮ ಮತ್ತು ಭಕ್ತಿಯನ್ನು ಅರ್ಪಿಸುವ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂಬುದಾಗಿ ಆಚರಿಸಲಾಗುತ್ತಿದೆ ಎಂದು ಎನ್.ಸಿ.ಸಿ ನಿವೃತ್ತ ಅಧಿಕಾರಿ ಮೇಜರ್ ಎಸ್.ಮಹಾಬಲೇಶ್ವರ್ ತಿಳಿಸಿದರು.
ನಗರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎನ್.ಸಿ.ಸಿ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದರು.
ಭಾರತೀಯರು ಅಪರೇಷನ್ ವಿಜಯ್ ಮೂಲಕ ಕಾರ್ಗಿಲ್-ದ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು ಎಂದರು.