ರೈತರು ತಪ್ಪದೆ ಬೆಳೆ ವಿಮೆ ಮಾಡಿಸಿಕೊಳ್ಳಿ

crop insurance
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದರೆ ಆರ್ಥಿಕ ನಷ್ಟ ತಪ್ಪಿಸಲು, ಸಲ್ ಬಿಮಾ ಬೆಳೆ ವಿಮೆ ಮಾಡಿಸಬೇಕು ಎಂದುಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕಿನ ಎಸ್.ಎಂ.ಗೊಲ್ಲಹಳ್ಳಿಯಲ್ಲಿ 2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯ ಬೀಜೋಪಚಾರ ಆಂದೋಲನ, ಕೀಟನಾಶಕ ಸುರಕ್ಷಿತ ಬಳಕೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಹಾಗೂ ಬೆಳೆ ವಿಮಾ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗುವ ದಿಸೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪಿಎಂ ಕಿಸಾನ್ 14ನೇ ಕಂತಿನ ಹಣವನ್ನು ದೇಶದ ಎಲ್ಲ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಪಿಎಂ ಕಿಸಾನ್ ಯೋಜನೆಯಲ್ಲಿ ಹಣ ಪಡೆಯುವುದು ಸೇರಿ ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಿಸಬೇಕು ಎಂದ ಅವರು, ಬಿತ್ತನೆ ಸಂದರ್ಭದಲ್ಲಿಯೇ ಬೀಜೋಪಚಾರ ಮಾಡುವುದರಿಂದ ಹಲವು ರೋಗ ತಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬೆಳೆಗಳಿಗೆ ಬರುವ ವಿವಿಧ ರೋಗ ತಡೆಯಲು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮ, ಉತ್ತಮ ಉಳುವರಿ ಪಡೆಯಲು ಅನುಸರಿಸಬೇಕಿರುವ ಆಧುನಿಕ ಕೃಷಿ ವಿಧಾನ, ರಸಗೊಬ್ಬರ ನಿರ್ವಹಣೆ ಕುರಿತಂತೆ ಕೃಷಿ ತಜ್ಞರು ಮಾಹಿತಿ ನೀಡಿದರು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ, ರೈತ ಫಲಾನುಭವಿಗಳಿಗೆ ಪ್ರಾತ್ಯಕ್ಷಿಕೆ ಕೈಗೊಳ್ಳಲು ರಾಗಿ ಎಂ.ಎಲ್.365 ತಳಿಯ ಬಿತ್ತನೆ ಬೀಜವನ್ನು ವಿತರಿಸಲಾಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಿ.ರಾಜೇಶ್ವರಿ, ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯ, ಬಿತ್ತನೆ ಬೀಜ, ಬೆಳೆ ಸಮೀಕ್ಷೆ, ಬೆಳೆ ವಿಮಾ ಯೋಜನೆ, ಕೃಷಿ ಯಾಂತ್ರೀಕರಣ, ಹನಿ ನೀರಾವರಿ ಮತ್ತು ಇತರೆ ಇಲಾಖಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net