

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಯಾವುದೇ ಕೆಲಸಗಳು ಆಗುತ್ತಿಲ್ಲ. ಆಯುಕ್ತರು, ಪ್ರಾದೇಶಿಕ ಆಯುಕ್ತರ ಹೆಸರೇಳಿಕೊಂಡು ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಗಂಭೀರ ಆರೋಪ ಮಾಡಿದರು.
ಸಾರ್ವಜನಿಕರು, ಆಸ್ತಿ ಮಾಲೀಕರು ತಮ್ಮ ಕೆಲಸಗಳಿಗೆ ನಿತ್ಯವೂ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ನೀಡದಿದ್ದರೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಇ-ಸ್ವತ್ತು ಮಾಡಿಸಲು ಸಹ ತಿಂಗಳುಗಟ್ಟಲೇ ಕಾಯುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೆ.ಎಸ್.ಈಶ್ವರಪ್ಪ ಅವರು ಉಸ್ತುವಾರಿ ಸಚಿವರಾಗಿದ್ದಾಗ ಆಸ್ತಿಗಾಗಿ ಪ್ರಾಪರ್ಟಿ ಕಾರ್ಡ್ ಜಾರಿಗೆ ತರಲಾಗಿತ್ತು. ಆಗ ಎಲ್ಲ ದಾಖಲೆ ನೀಡಿದ್ದರೂ ಇದೀಗ ಇ-ಸ್ವತ್ತು ಮಾಡಿಸಲು ಅದೇ ದಾಖಲೆಗಳನ್ನು ನೀಡಬೇಕಿದೆ. ಇ-ಸ್ವತ್ತು ಮಾಡಿಸಲು ಸಾಕಷ್ಟು ಖರ್ಚಾಗುತ್ತಿದ್ದು ಲಂಚ ಕೂಡ ನೀಡಬೇಕಾಗಿದೆ. ಇದನ್ನು ಪ್ರಶ್ನಿಸಿದರೆ ಸಿಬ್ಬಂದಿ ಮೇಲಾಧಿಕಾರಿಗಳತ್ತ ಬೊಟ್ಟು ತೋರಿತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳದ್ದೇ ಆಟವಾಗಿದೆ. ಒಂದೂವರೆ ವರ್ಷವಾದರೂ ಚುನಾವಣೆ ಆಗಿಲ್ಲ. ನಗರದ ರಸ್ತೆಗಳಲ್ಲೆಲ್ಲ ಗುಂಡಿಗಳು ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಕ್ಷಣವೇ ನಗರ ಸಂಚಾರ ಮಾಡಿ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ನರಸಿಂಹ ಗಂಧದಮನೆ, ಎಸ್.ವಿ.ರಾಜಮ್ಮ, ರಘು, ದಯಾನಂದ್, ಗೋಪಿ ಮೊದಲಿಯಾರ್, ಎಸ್.ಸಿದ್ದೇಶ್, ಸಂಜಯ್ ಕಶ್ಯಪ್, ಸೈಯದ್ ನಿಹಾಲ್, ಬೊಮ್ಮನಕಟ್ಟೆ ಮಂಜುನಾಥ್, ಸಿದ್ದಪ್ಪ, ಸುನಿಲ್ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.