

ಗೊಳಸಂಗಿ: ಮುತ್ತಗಿ ಕ್ರಾಸ್ ಬಳಿಯ ತೆಲಗಿ ರಸ್ತೆಯ ತೋಟವೊಂದರಲ್ಲಿ ಭಾನುವಾರ ಮಧ್ಯಾಹ್ನ ಹಸಿವು ಎಂದು ಬಂದವರಿಗೆ ತುತ್ತು ನೀಡಲು ಹೋದ ಮೂಗಿ ಮಹಿಳೆಯ ಕಿವಿ, ಕತ್ತಿಗೆ ಕೈ ಹಾಕಿ ಕಳ್ಳರು ಚಿನ್ನಾಭರಣ ದೋಚಿದ್ದಾರೆ.
ಮೂಲತಃ ತಾಳಿಕೋಟಿ ತಾಲೂಕಿನ ಹಂಚಲಿ ಗ್ರಾಮದ ಮಾತು ಬಾರದ ಮಹಿಳೆ ಜಮೇಲಾ ಹೈದರಸಾಬ ಮುಲ್ಲಾ (55) ಅವರ ಕಿವಿ, ಕುತ್ತಿಗೆ ಮತ್ತು ಎಡಗೈನ ಎರಡು ಬೆರಳುಗಳಿಗೆ ಗಾಯಗಳಾಗಿವೆ.
ಏನಿದು ಘಟನೆ ?: ಹಂಚಲಿ ಗ್ರಾಮದ ಜಮೇಲಾ ಮುಲ್ಲಾ ಇತ್ತೀಚಿನ ಕೆಲವು ತಿಂಗಳಿನಿಂದ ಮುತ್ತಗಿ ಕ್ರಾಸ್‌ನ ಚಹಾ ಅಂಗಡಿಯೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಪಕ್ಕದ ತೆಲಗಿ ರಸ್ತೆಯ ಮುತ್ತಗಿ ಗ್ರಾಮದ ಶ್ರೀಶೈಲ ಅಬ್ಬಿಹಾಳ ಎಂಬುವವರ ತೋಟದ ಮನೆಯಲ್ಲಿ ಬಾಡಿಗೆ ಇದ್ದರು. ಭಾನುವಾರ ಮಧ್ಯಾಹ್ನ ಒಂದು ಗಂಟೆ ಸಮಯಕ್ಕೆ ತೋಟದ ಮನೆಯಲ್ಲಿ ಜಮೇಲಾ ಊಟ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಇಬ್ಬರು ಯುವಕರು ನಮಗೂ ಬಾಯಾರಿಕೆ ಮತ್ತು ಹಸಿವಾಗಿದೆ. ನಮಗೂ ಒಂದಿಷ್ಟು ಊಟಕ್ಕೆ ನೀಡಿರೆಂದು ಹೋಗಿದ್ದಾರೆ. ಹಸಿವಿನ ದಾಹದಿಂದ ಬಂದವರೆಂದು ತಿಳಿದು ಜಮೇಲಾ ಊಟ ನೀಡಲು ಮುಂದಾದಾಗ ಹಿಂದಿನಿಂದ ಬಂದ ಖದೀಮರು ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ನಂತರ ಬಲ ಬದಿಯ ಕಿವಿಯೋಲೆ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮೂಗಿ ಮಹಿಳೆ ಕೊಸರಾಡಿದಾಗ ಹರಿತವಾದ ಆಯುಧವೊಂದನ್ನು ಬಳಸಿ ಕಿವಿಯನ್ನೇ ತುಂಡರಿಸಿ ಕಿವಿಯೋಲೆ ಕಿತ್ತುಕೊಂಡಿದ್ದಾರೆ. ಬಳಿಕ ಚಾಕು ತೋರಿಸಿ ಜೀವ ತೆಗೆಯಲು ಯತ್ನಿಸಿದ್ದಾರೆ. ಆಗ ದಿಕ್ಕು ತೋಚದ ಮಹಿಳೆ ಚಾಕುವನ್ನು ಕಿತ್ತುಕೊಳ್ಳಲು ಹೋದಾಗ ಎಡಗೈನ ಎರಡು ಬೆರಳುಗಳಿಗೆ ತೀವ್ರ ರಕ್ತಸ್ರಾವವಾಗಿ ಗಾಯಗಳಾಗಿವೆ. ಬೇರೆ ದಾರಿ ಕಾಣದ ಖದೀಮರು ದೋಚಿದ ಅಂದಾಜು ಒಂದೂವರೆ ತೊಲ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ. ಬಳಿಕ ಗಾಯಗೊಂಡ ಮಹಿಳೆಗೆ ಗೊಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಿಲು ಬಡಿದ ಕಿಡಿಗೇಡಿಗಳು: ಏತನ್ಮಧ್ಯೆ ಭಾನುವಾರ ಮಧ್ಯರಾತ್ರಿ ಗೊಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗಿನ ಎರಡು ವಸತಿಗೃಹಗಳ ಕಿಟಕಿ, ಬಾಗಿಲುಗಳನ್ನು ಯಾರೋ ಕಿಡಿಗೇಡಿಗಳು ಬಡಿದಿದ್ದಾರೆ. ಈ ಘಟನೆಯಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.