ಶಾಸಕ ಯತ್ನಾಳರ ಉಚ್ಚಾಟನೆಗೆ ತೀವ್ರ ಖಂಡನೆ, ಬಿಜೆಪಿ ತನ್ನದೇ ಸಿದ್ಧಾಂತ ತಾನೇ ಹಾಳು ಮಾಡುತ್ತಿದೆ ಎಂದ ದಯಾಸಾಗರ ಪಾಟೀಲ

Dayasagar Patil
Published on

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟಿಸುವ ಮೂಲಕ ಬಿಜೆಪಿ ತಾನೇ ರೂಪಿಸಿದ ನಿಯಮ, ತನ್ನದೇ ತತ್ವ ಹಾಗೂ ಸಿದ್ಧಾಂತವನ್ನು ಮುರಿಯುತ್ತಿದೆ ಎಂದು ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಆರೋಪಿಸಿದರು.

ಭ್ರಷ್ಟಾಚಾರ ರಹಿತ, ಹಿಂದುತ್ವ ಪರ, ಕುಟುಂಬ ರಾಜಕಾರಣದ ವಿರುದ್ಧವಾದ ನಿಲುವು ಮೆಚ್ಚಿ ಅನೇಕರು ಬಿಜೆಪಿ ಸೇರ್ಪಡೆಯಾಗಿದ್ದರಲ್ಲದೇ ಕಾರ್ಯಕರ್ತರು ಸಹ ಆ ವಿಚಾರ, ತತ್ವ ಮತ್ತು ಸಿದ್ದಾಂತ ಮೆಚ್ಚಿ ಪಕ್ಷವನ್ನು ಬೆಂಬಲಿಸಿದ್ದರು. ಆದರೆ, ಇದೇ ಭ್ರಷ್ಟಾಚಾರ, ಹೊಂದಾಣಿಕೆ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಧ್ವನಿ ಎತ್ತಿದರೆ ಯತ್ನಾಳರನ್ನು ಪಕ್ಷದಿಂದ ಹೊರಹಾಕಲಾಗಿದೆ. ಹಾಗಾದರೆ, ಹಿಂದುತ್ವದ ಪರ ಮಾತನಾಡಿದ್ದು ತಪ್ಪೆ? ಹಿಂದುತ್ವದ ಪರ ಇರುವವರನ್ನು ಪಕ್ಷದಿಂದ ಹೊರಹಾಕುವುದಾದರೆ ಯತ್ನಾಳರ ಜೊತೆಗೆ ನಾವೆಲ್ಲರೂ ಹೊರ ಹೋಗಲು ಸಿದ್ಧ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಪಕ್ಷಕ್ಕಿಂತ ತತ್ವ-ಸಿದ್ಧಾಂತವೇ ನಮಗೆ ಮುಖ್ಯ. ಇಂದು ಆ ತತ್ವ ಸಿದ್ಧಾಂತಗಳನ್ನೇ ಗಾಳಿಗೆ ತೂರಲಾಗುತ್ತಿದೆ. ಹಿಂದುತ್ವದ ಪರ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಅನಂತಕುಮಾರ ಹೆಗಡೆಯಂಥವರು ಉಚ್ಚಾಟನೆಗೊಳಗಾಗುತ್ತಿದ್ದಾರೆ. ಪ್ರತಾಪ ಸಿಂಹ ಅವರಂಥವರು ಮೂಲೆಗುಂಪಾಗುತ್ತಿದ್ದಾರೆ. ಹೀಗಾಗಿ ಬಿಜೆಪಿ ತಾನೇ ರೂಪಿಸಿದ ತತ್ವ ಸಿದ್ದಾಂತವನ್ನು ಗಾಳಿಗೆ ತೂರಿದ್ದು, ಆ ತತ್ವ ಸಿದ್ಧಾಂತಕ್ಕಾಗಿ ಪಕ್ಷದಿಂದ ಹೊರನಡೆಯಲೂ ನಾವು ಸಿದ್ಧ ಎಂದ ದಯಾಸಾಗರ ಪಾಟೀಲ, ಈಗಲೂ ಕಾಲ ಮಿಂಚಿಲ್ಲ. ಬಿಜೆಪಿ ಹೈಕಮಾಂಡ್ ತನ್ನ ನಿಲುವು ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿ ನೆಲ ಕಚ್ಚುವುದು ನಿಶ್ಚಿತ ಎಂದರು.

ಬಿಜೆಪಿ ಸಾಗರದಷ್ಟೇ ವಿಶಾಲವಾದ ಪಕ್ಷ. ಆಂತರಿಕ ಭಿನ್ನಾಭಿಪ್ರಾಯ, ಸಣ್ಣ ಪುಟ್ಟ ಗೊಂದಲ ಸಹಜ. ಹಾಗಂತ ಮೇರು ವ್ಯಕ್ತಿತ್ವದ ನಾಯಕ ಯತ್ನಾಳರನ್ನು ಉಚ್ಚಾಟನೆ ಮಾಡಿರುವುದು ಹಿಂದುತ್ವಕ್ಕೆ ಮಾಡಿದ ಅನ್ಯಾಯ. ಬಸನಗೌಡ ಪಾಟೀಲರು ಪಕ್ಷದಲ್ಲಿದ್ದರೆ ತಮಗೆ ಉಳಿಗಾಲವಿಲ್ಲ, ಹೊಂದಾಣಿಕೆ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲೆಂಬ ಕಾರಣಕ್ಕೆ ಕುತಂತ್ರದಿಂದ ಉಚ್ಚಾಟನೆಗೊಳಿಸಲಾಗಿದೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಇಂಥ ತಪ್ಪು ನಿರ್ಧಾರದ ವಿರುದ್ಧ ಧ್ವನಿ ಎತ್ತದೇ ಹೋದರೆ ಭವಿಷ್ಯದಲ್ಲಿ ಪಕ್ಷಕ್ಕೆ ಹಾನಿಯಾಗಲಿದೆ ಎಂದರು.

ಕೆಲವು ಹೊಂದಾಣಿಕೆ ರಾಜಕಾರಣದಿಂದಾಗಿಯೇ ನಾನು ಕೂಡ ಇಂಡಿ ಕ್ಷೇತ್ರದಲ್ಲಿ ಸೋತಿದ್ದೆ. ಇಂಥ ಹೊಂದಾಣಿಕೆ ರಾಜಕಾರಣವೇ ಬೇಡವೆಂದು ಯತ್ನಾಳರು ಧ್ವನಿ ಎತ್ತಿದ್ದರು. ಇದು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸಹ ಇದೆ. ಇಂಥ ಹೊಂದಾಣಿಕೆಯನ್ನೇ ಹೋಗಲಾಡಿಸಬೇಕೆಂಬುದು ಬಹುತೇಕರ ಒತ್ತಾಸೆಯಾಗಿದೆ ಎಂದರು.

ಮುಖಂಡ ಬಿ.ಎಸ್. ಪಾಟೀಲ ನಾಗರಾಳಹುಲಿ ಮಾತನಾಡಿ, ಕೂಡಲೇ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡು ಯತ್ನಾಳರನ್ನು ಪಕ್ಷಕ್ಕೆ ಬರಮಾಡಿಕೊಳ್ಳದೇ ಹೋದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ರಾಜು ಬಿರಾದಾರ, ಪ್ರವೀಣ ನಾಟಿಕಾರ, ಶರಣು ಕಾಖಂಡಕಿ, ಪ್ರವೀಣ ವಂದಾಲ, ಶಂಕರ ಹೂಗಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net