ದಯಾನಂದ ಸರಸ್ವತಿ ಸಂದೇಶ ಸಾರ್ವಕಾಲಿಕ : ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ

19
Published on

ಮೈಸೂರು: ಸಮಾಜದಲ್ಲಿ ಕಡೆಗಣೆನೆಗೆ ಒಳಗಾಗಿದ್ದ ಸ್ತ್ರೀ ಮತ್ತು ಶೂದ್ರರಿಗೂ ವೇದದ ಪರಮಾಧಿಕಾರವನ್ನು ಪ್ರತಿಪಾದಿಸಿದವರು ಮಹರ್ಷಿ ದಯಾನಂದ ಸರಸ್ವತಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.

ನಗರದ ದೇವರಾಜ ಮೊಹಲ್ಲಾದಲ್ಲಿರುವ ಆರ್ಯ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ಶ್ರೀ ದಯಾನಂದ ಸರಸ್ವತಿ ಅವರ ಸಂಸ್ಮರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಅಸಮಾನತೆ, ಮೌಢ್ಯಗಳ ವಿರುದ್ಧ ದನಿಯೆತ್ತಿ ಕಳೆದ 240 ವರ್ಷಗಳ ಹಿಂದೆಯೇ ಮನುಕುಲದ ಒಳಿತಿಗಾಗಿ ವೇದಗಳ ಅವಶ್ಯಕತೆಯನ್ನು ಮನಗಾಣಿಸಿದ ಕೀರ್ತಿ ಮಹರ್ಷಿ ದಯಾನಂದ ಸರಸ್ವತಿಗಳಿಗೆ ಸಲ್ಲುತ್ತದೆ ಎಂದರು.

ಶ್ರೀ ದಯಾನಂದ ಸರಸ್ವತಿಗಳ ಕುರಿತು ಮಾತನಾಡಿದ ಸಂಸ್ಕೃತ ವಿದುಷಿ ಕೆ.ಲೀಲಾ ಪ್ರಕಾಶ್, ವೇದಗಳ ಮೇಲೆ ಆಧಾರಿತವಾಗಿ ನಿಂತ ಸನಾತನ ಧರ್ಮವು ಪ್ರತಿಯೊಬ್ಬ ಮನುಷ್ಯನಿಗೂ ವೇದಗಳ ಮಹತ್ವವನ್ನು ಸಾರುತ್ತದೆ ಎಂದರಲ್ಲದೆ, ವೇದಗಳಿಗೆ ಹಿಂತಿರುಗಿ ಎಂಬ ಮಹರ್ಷಿಗಳ ಸಂದೇಶ ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ವಿಗ್ರಹ ಆರಾಧನೆಯನ್ನು ಬಲವಾಗಿ ಖಂಡಿಸಿದ ಮಹರ್ಷಿ ದಯಾನಂದ ಸರಸ್ವತಿ ಅವರು, ಮನುಕುಲದ ಒಳಿತಿಗಾಗಿಯೇ ಇರುವ ವೇದಗಳ ನಿಜವಾದ ಸಂದೇಶ ಸಾರಲು ಸತ್ಯಾರ್ಥ ಪ್ರಕಾಶ ಎಂಬ ಗ್ರಂಥವನ್ನು ರಚಿಸಿ ಮನುಕುಲಕ್ಕೆ ನೀಡಿದರು ಎಂದರು. ಸತ್ಯದ ಪ್ರತಿಪಾದನೆ ಮಾಡೋ ಹೊರಟ ಮಹರ್ಷಿಗಳನ್ನು ಕೊಲ್ಲಲು ಹಲವಾರು ಪ್ರಯತ್ನ ನಡೆಸಿದರಾದರೂ ಸ್ವಾಮೀಜಿ ತಮ್ಮ ಯೋಗ ಬಲದಿಂದ ಅವುಗಳಿಂದ ಪಾರಾದರು. ಆದರೆ ಕೊನೆಗೆ ಇಂತಹ ಮಹರ್ಷಿಗಳಿಗೆ ಗಾಜಿನ ಪುಡಿಯನ್ನು ಆಹಾರದಲ್ಲಿ ಮಿಶ್ರಣ ಮಾಡಿ ಹತ್ಯೆ ಮಾಡಿದ್ದು ದುರಂತ ಎಂದರು.

ಆರ್ಯ ಸಮಾಜದ ಅಧ್ಯಕ್ಷ ಎಸ್. ಹೇಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಲೀಲಾ ಪ್ರಕಾಶ್ ಹಾಗೂ ಯೋಗಾಚಾರ್ಯ ಬಿ.ಪಿ. ಮೂರ್ತಿ ಅವರಿಗೆ ಮಹರ್ಷಿ ದಯಾನಂದ ಸರಸ್ವತಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಅಗ್ನಿಹೋತ್ರ ನಡೆಸಲಾಯಿತು, ವೇದ ಮಂತ್ರ ಪಠಣಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ, ಸಂಚಾಲಕ ಎಂ ವಿ ನಾಗೇಂದ್ರ ಬಾಬು, ಆರ್ಯ ಸಮಾಜದ ಉಪಾಧ್ಯಕ್ಷ ಪೃಥ್ವಿರಾಜ್, ಕಾರ್ಯದರ್ಶಿ ಕೆ.ವಿ.ಉಮೇಶ್, ನವೀನ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net