ಅಧ್ಯಕ್ಷರಾಗಿ ದಯಾನಂದ್ ಅವಿರೋಧ ಆಯ್ಕೆ

SRP_13-02jpj
Published on

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಪ್ರಸಿದ್ಧ ಗಂಜಾಂನ ಶ್ರೀ ನಿಮಿಷಾಂಬ ದೇವಾಲಯದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಪುರಸಭೆ ಸದಸ್ಯ ಎಸ್.ಎನ್.ದಯಾನಂದ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಗಂಜಾಂನ ದೇವಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಅವರ ನೇತೃತ್ವದಲ್ಲಿ ನಡೆದ ಸಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಶ್ರೀ ರಂಗಪಟ್ಟಣ ಟೌನ್ ಕುಂಬಾರಗೇರಿ ಬೀದಿಯ ಎಸ್.ಎನ್.ದಯಾನಂದ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಇವರೊಂದಿಗೆ ಸಮಿತಿಯ 8 ಮಂದಿ ನಿರ್ದೇಶಕರಲ್ಲಿ ಮಹಿಳಾ ಮೀಸಲಾತಿ ಸ್ಥಾನದಲ್ಲಿ ಗಂಜಾಂನ ಮಾರಿಗುಡಿ ಬೀದಿಯ ಭಾಗ್ಯಲಕ್ಷ್ಮೀ, ಶ್ರೀರಂಗಪಟ್ಟಣದ ಕಾಳಮ್ಮನಗುಡಿ ಬೀದಿಯ ಸುಮಲತಾ, ಪರಿಶಿಷ್ಟಜಾತಿ ಮೀಸಲಾತಿಯಲ್ಲಿ ಗಂಜಾಂನ ಅಂಬೇಡ್ಕರ್ ಬೀದಿಯ ಆರ್.ರಂಗಸ್ವಾಮಿ, ಸಾಮಾನ್ಯ ಸ್ಥಾನದಲ್ಲಿ ಗಂಜಾಂನ ಕುರಾದ್ ಬೀದಿಯ ಜಿ.ಎನ್.ಪೂರ್ಣಪ್ರಜ್ಞ , ಚಿಕ್ಕಗರಡಿ ಬೀದಿಯ ಟಿ.ಕೃಷ್ಣ, ಮಾರಿಗುಡಿ ಬೀದಿಯ ಪೈ.ಪಿ.ಬಾಲಕೃಷ್ಣ, ಚಿಕ್ಕಗರಡಿ ಹಿಂಭಾಗದ ಎಸ್.ಕೃಷ್ಣ ಹಾಗೂ ಅರ್ಚಕ ಸ್ಥಾನದಿಂದ ಪ್ರಧಾನ ಅರ್ಚಕ ಸೂರ್ಯನಾರಾಯಣಭಟ್ ನೇಮಕಗೊಂಡಿದ್ದಾರೆ. ಸಮಿತಿಯ ನೂತನ ನಿರ್ದೇಶಕರು ಹಾಗೂ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಶುಭ ಹಾರೈಸಿದರು.

ಇದೆ ವೇಳೆ ಪ್ರಥಮ ಭಾರಿಗೆ ನಡೆದ ದೇವಾಲಯದ ವ್ಯವಸ್ಥಾನ ಸಮಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಸ್.ಎನ್.ದಯಾನಂದ್ ಮಾತನಾಡಿ, ಅತ್ಯಂತ ಪೌರಾಣಿಕ ಹಿನ್ನಲೆಯುಳ್ಳ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯದ ಸುತ್ತಲು ಪ್ರಾಚೀನ ಮಾದರಿಯ ಶಿಲಾನ್ಯಾಸ ಕಟ್ಟಡದ ಚಂದ್ರಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ನಿರ್ಮಾಣ ಕಾಮಗಾರಿಗೆ ತಗುಲುವ ಸುಮಾರು 15ರಿಂದ 20 ಕೋಟಿ ವೆಚ್ಚದ ಅನುದಾನಕ್ಕೆ ರಾಜ್ಯಸರ್ಕಾರಕ್ಕೆ ಡಿಪಿಆರ್ ಕಳುಹಿಸಲು ಚಿಂತನೆ ನಡೆಸಲಾಗಿದೆ. ಈ ಕಾರ್ಯಕ್ಕೆ ದಾನಿಗಳು ಸಹ ನೆರವು ನೀಡಲು ಮುಂದೆ ಬಂದಿದ್ದಾರೆ. ಇನ್ನು ದೇವಾಲಯದಲ್ಲಿ ಈ ಭಾರಿ ಅಮ್ಮನವರ ಜನ್ಮ ಮಹೋತ್ಸವಕ್ಕೆ ಪ್ರಾರಂಭಿಕವಾಗಿ ಸರಳವಾಗಿ ರಥೋತ್ಸವ ಎಳೆಯಲಾಗಿದ್ದು, ಮುಂಬರುವ ಮಾಘ ಮಾಸದ ವೇಳೆ ಬೃಹತ್ ಬ್ರಹ್ಮರಥ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಂತಿಮವಾಗಿ ಮುಜರಾಯಿ ಇಲಾಖೆಗೆ ಸೇರಿದ ಶ್ರೀರಂಗಪಟ್ಟಣದ ಗೌತಮ ಋಷಿ ಸ್ಥಾಪಿತ ಚತುರ್‌ಯುಗಮೂರ್ತಿ ಶ್ರೀಗಂಗಾಧರೇಶ್ವರಸ್ವಾಮಿ ದೇಗುಲ ಪ್ರಸ್ತುತ ಶ್ರೀರಂಗನಾಥಸ್ವಾಮಿ ದೇಗುಲದ ಸುರ್ಪದಿಯಲ್ಲಿದೆ. ಈ ದೇಗುಲವನ್ನು ಶ್ರೀ ನಿಮಿಷಾಂಬ ಆಡಳಿತ ದತ್ತು ಸ್ವೀಕರಿಸಿ ಧಾರ್ಮಿಕ ಕಾರ್ಯಗಳೊಂದಿಗೆ ಜೀರ್ಣೋದ್ಧಾರಗೊಳಿಸಲು ತೀರ್ಮಾನಿಸಲಾಗಿದೆ. ನಾಳೆಯಿಂದಲೇ ಈ ಬಗ್ಗೆ ಮುಜರಾಯಿ ಇಲಾಖೆಗೆ ಪತ್ರವ್ಯವಹಾರ ನಡೆಸಿ ನಮಗೆ ಹಸ್ತಾಂತರಿಸುವಂತೆ ಮನವಿ ಮಾಡಲು ಚಿಂತಿಸಲಾಗಿದೆ. ಇದಕ್ಕೆ ಸಮಿತಿ ಸದಸ್ಯರ ಸಮ್ಮತಿ ಕೋರಿದರು. ಸಮಿತಿಯ ನಿರ್ದೇಶಕರು ಸಹ ಪ್ರಸ್ತಾಪಗೊಂಡ 3 ವಿಚಾರಗಳಿಗೂ ಒಮ್ಮತದಿಂದ ಒಕ್ಕೊರಲ ಸಮ್ಮತಿ ಸೂಚಿಸಿದರು. ದೇವಾಲಯದ ಇಒ ಸಿ.ಜಿ.ಕೃಷ್ಣ, ಸಿಬ್ಬಂದಿ ಚಂದ್ರಮೋಹನ್ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net