

ನೇಸರಗಿ:ಪುರಾತನ ದೇವಸ್ಥಾನ, ಐತಿಹಾಸಿಕ ಸ್ಥಳಗಳ ಸಂರಕ್ಷಣೆಗೆ ಸರ್ಕಾರ ಪುರಾತತ್ವ ಇಲಾಖೆ ಮೂಲಕ ಏನೆಲ್ಲ ಕಸರತ್ತು ನಡೆಸಿದರೂ ಕೆಲ ದೇವಸ್ಥಾನಗಳು ಅಜ್ಞಾತವಾಗಿಯೇ ಉಳಿಯುತ್ತಿವೆ.
ಐತಿಹಾಸಿಕ ಸಂಸ್ಕೃತಿ ಸಾರುವ ಈ ಕುರುಹುಗಳು ಶಿಥಿಲಗೊಂಡು ದಿನೇ ದಿನೆ ಜೀರ್ಣಗೊಳ್ಳುತ್ತಿವೆ. ನೇಸರಗಿ ಗ್ರಾಮದಲ್ಲಿರುವ ರಟ್ಟರ ಕಾಲದ ಪುರಾತನ ಜೋಡುಗುಡಿ ಬಸವೇಶ್ವರ ದೇವಸ್ಥಾನ ಕೂಡ ಸಮರ್ಪಕ ನಿರ್ವಹಣೆ ಇಲ್ಲದೆ, ನಿರ್ಲಕ್ಷೃದ ಪರಿಣಾಮ ಅಳಿವಿನಂಚಿಗೆ ತಲುಪಿದೆ.
ರಟ್ಟರ ಕಾಲದ ದೇವಸ್ಥಾನ: ಪ್ರಾಚೀನ ಕಾಲದಲ್ಲಿ ನಿರ್ಮಾಣಗೊಂಡ ಜೋಡುಗುಡಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಆವರಣದಲ್ಲಿ ಎರಡು ದೇವಸ್ಥಾನ ಇರುವುದರಿಂದ ಜೋಡುಗುಡಿ ಎಂದು ಕರೆಯಲಾಗಿದೆ. 12ನೇ ಶತಮಾನದಲ್ಲಿ ರಟ್ಟರ ನಾಲ್ಕನೇ ಕಾರ್ತವೀರ‌್ಯನು ಈ ದೇವಸ್ಥಾನ ಕಟ್ಟಿಸಿದ್ದ ಎಂದು ಇತಿಹಾಸ ಹೇಳುತ್ತದೆ. ನಾಲ್ಕನೇ ಕಾರ್ತವೀರ‌್ಯನ ಆಡಳಿತಕ್ಕೆ ಆರು ಹಳ್ಳಿಗಳನ್ನೊಳಗೊಂಡ ನೇಸರಗಿ ಗ್ರಾಮವೂ ಒಳಪಟ್ಟಿತ್ತೆಂದು ಐತಿಹಾಸಿಕ ಶಾಸನದಿಂದ ತಿಳಿದುಬರುತ್ತದೆ.
ದೇವಸ್ಥಾನದ ವೈಶಿಷ್ಟೃ: ಕಪ್ಪು ಕಲ್ಲಿನಿಂದ ಕೆತ್ತಿದ ರತ್ನತ್ರಯರು ದೇವಸ್ಥಾನದ ಮುಖ ಮಂಟಪದ ವಿಶೇಷ. ಮಂಟಪವು ಚೌಕಾಕಾರದ ಛಾವಣಿ ಹೊಂದಿದೆ. ಒಳಗೆ ಶಿವಲಿಂಗವಿದೆ. ಹೊರಾಂಗಣದಲ್ಲಿರುವ ಎರಡು ದೇವಸ್ಥಾನಗಳಲ್ಲಿಯೂ ಬಸವಣ್ಣ ಮೂರ್ತಿ ಭಗ್ನಗೊಂಡಿದೆ. ಇಲ್ಲಿದ್ದ ಹಳೆಯ ಶಿಲಾಶಾಸನವೊಂದರಲ್ಲಿ ದೇವಸ್ಥಾನವನ್ನು ಈಶ್ವರ ಗುಡಿ ಎಂದು ಕರೆಯಲಾಗುತ್ತಿತ್ತು ಎಂಬ ಉಲ್ಲೇಖವಿದೆ. ಆದರೆ ಜಿಲ್ಲಾಡಳಿತ ಸಂಶೋಧನೆ ನೆಪದಲ್ಲಿ 19.1.2007 ರಂದು ಶಿಲಾಶಾಸನವನ್ನು ತೆಗೆದುಕೊಂಡು ಹೋಗಿದೆ.
ಶಿಲಾಶಾಸನವನ್ನು ಎಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಶಿವರಾತ್ರಿ ದಿನಗಳಲ್ಲಿ ಮಾತ್ರ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ನಂತರದ ದಿನಗಳಲ್ಲಿ ನಿರ್ಲಕ್ಷಿಸಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ದೇವಸ್ಥಾನದ ಹಿಂಭಾಗದ ಕಲ್ಲು ಕಿತ್ತು ಬಿದ್ದಿದೆ. ದಿನದಿಂದ ದಿನಕ್ಕೆ ಕಟ್ಟಡದ ಕಲ್ಲುಗಳು ಬಿದ್ದು ಹಾಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಡೀ ದೇವಸ್ಥಾನ ಕುಸಿದು ಬಿದ್ದರೂ ಅಚ್ಚರಿ ಇಲ್ಲ. ಪ್ರಾಚ್ಯವಸ್ತು ಇಲಾಖೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಅತ್ಯುತ್ತಮ ಶಿಲ್ಪಕಲೆ ಹೊಂದಿರುವ ಈ ದೇವಸ್ಥಾನ ಸಂರಕ್ಷಿಸುವ ಕೆಲಸ ನಡೆಯಬೇಕಿದೆ.
ಬಾದಾಮಿ, ಐಹೊಳೆ, ಪಟ್ಟದಕಲ್ಲು ಮಾದರಿಯಲ್ಲಿ ದೇವಸ್ಥಾನ ಅಭಿವೃದ್ಧಿಪಡಿಸಿದಲ್ಲಿ ಪ್ರವಾಸೋದ್ಯಮ ತಾಣವಾಗುವುದರಲ್ಲಿ ಸಂಶಯವಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಇತ್ತ ಗಮನಹರಿಸಿದರೆ ಅನುಕೂಲವಾಗುತ್ತದೆ. ಪ್ರಾಚೀನ ಗತವೈಭವ ಮತ್ತೆ ಮರುಕಳಿಸುವ ನಿಟ್ಟಿನಲ್ಲಿ ಸರ್ಕಾರ, ಸಂಘ- ಸಂಸ್ಥೆಗಳು ಕೈಜೋಡಿಸುವ ಅಗತ್ಯವಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.
ನೇಸರಗಿ ಜೋಡಗುಡಿ ಬಸವೇಶ್ವರ ದೇವಸ್ಥಾನದ ಬಗ್ಗೆ ಪುರಾತತ್ವ ಇಲಾಖೆಯ ಗಮನಕ್ಕೆ ಈಗಾಗಲೇ ತರಲಾಗಿದೆ. ಪರಿಶೀಲನೆ ಮಾಡಿದ್ದಾರೆ. ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.|ಸೌಮ್ಯಾ ಪಿಡಿಒ, ನೇಸರಗಿ
ಹಳೆಯ ಪ್ರಾಚೀನ ಕಾಲದ ಜೋಡುಗುಡಿ ಶಿಥಿಲಾವಸ್ಥೆ ತಲುಪಿದ್ದು, ಜೀಣೋದ್ಧಾರ ಮಾಡುವ ಅಗತ್ಯವಿದೆ. ಜಿಲ್ಲಾಡಳಿತ, ಪ್ರಾಚ್ಯವಸ್ತು ಇಲಾಖೆ ಇತ್ತ ಗಮನಹರಿಸಿ ಅಭಿವೃದ್ಧಿಪಡಿಸಬೇಕು. | ಡಾ.ಚನಗೌಡ ಪಾಟೀಲ ಗ್ರಾಪಂ ಮಾಜಿ ಸದಸ್ಯ
| ಯಲ್ಲಪ್ಪ ಮಡಿವಾಳರ