

ಬೆಂಗಳೂರು: ಸ್ಥಿರಾಸ್ತಿ ದಾಸ್ತಾವೇಜು ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಜಾರಿಗೆ ಬಂದಿರುವ ಹೊಸ ನಿಯಮವು ನಾಗರಿಕರಲ್ಲಿ ಕೆಲ ಗೊಂದಲಗಳನ್ನು ಹುಟ್ಟುಹಾಕಿದೆ.
ಬಿಬಿಎಂಪಿಯಿಂದ ಇ-ಖಾತಾ ಪಡೆಯಲಾಗದೆ ಹಲವು ಮಂದಿ ಸ್ವತ್ತು ನೋಂದಣಿಗೆ ಪರದಾಡಿದರು. ಕಂದಾಯ ಇಲಾಖೆಯಿಂದ ಸೂಚನೆ ಇದ್ದರೂ, ಪಾಲಿಕೆಯ ಆನ್‌ಲೈನ್ ಸೇವೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಇ-ಖಾತೆ ಪಡೆಯಲು ಸಾಧ್ಯವಾಗಲಿಲ್ಲ. ಕೆಲವರಷ್ಟೇ ಮೊದಲ ಅರ್ಜಿ ಸಲ್ಲಿಸಿದ್ದವರಿಗೆ ಮಾತ್ರ ಖಾತಾ ಪ್ರತಿ ದೊರೆತಿದೆ.
ರಾಜ್ಯ ಸರ್ಕಾರ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ನೋಂದಣಿ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸಲು ಹೊಸ ನಿಯಮವನ್ನು ಪರಿಚಿಯಿಸಿದೆ. ಇ-ಖಾತಾ ಇಲ್ಲದೆ ನೋಂದಣಿಗೆ ಅವಕಾಶ ಇಲ್ಲವೆಂದು ಈ ಮೊದಲೇ ಕಂದಾಯ ಸಚಿವರು ಸ್ಪಷ್ಟಪಡಿಸಿದರು. ತಂತ್ರಾಂಶ ಹಾಗೂ ತರಬೇತಿಯನ್ನು ಸಂಬಂಧಿಸಿದವರಿಗೆ ನೀಡಿರುವುದರಿಂದ ಹೊಸ ವ್ಯವಸ್ಥೆ ಜಾರಿ ವೇಳೆ ಸಮಸ್ಯೆಯಾಗದು ಎಂದಿದ್ದರು. ಆದರೆ, ಬಿಬಿಎಂಪಿಯಿಂದ ಇ-ಖಾತಾ ಸಿಗದೆ ಜನರು ಅಧಿಕಾರಿಗಳ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ.
ಇದರ ಹೊರತಾಗಿಯೂ ಅ.1ರಿಂದ ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್‌ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಆರಂಭಿಸಲಾಗುತ್ತಿದೆ. ಪಾಲಿಕೆಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ಕರಡು ಇ-ಖಾತಾವನ್ನು ಆನ್‌ಲೈನ್‌ನಲ್ಲಿ ರಚಿಸಿ ಇರಿಸಲಾಗಿರುತ್ತದೆ. ಇದನ್ನು ನಾಗರಿಕರು ತಮ್ಮ ಸ್ವತ್ತಿನ ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ತಿಳಿಸಿದೆ. ಆದರೆ, ಹಲವು ಸ್ವತ್ತುದಾರರು ತಮ್ಮ ಆಸ್ತಿಯ ಸಂಖ್ಯ ಹಾಗೂ ದಾಖಲೆಯ ವಿವರವನ್ನು ನಮೂದಿಸದರೂ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ತಾಂತ್ರಿಕ ದೋಷ ಇದ್ದರೂ, ಪಾಲಿಕೆಯಿಂದ ಮಾರ್ಗದರ್ಶನ ಸಿಕ್ಕಿಲ್ಲ. ಆದಷ್ಟು ಬೇಗ ನಿಯಮದಂತೆರ ಎಲ್ಲರಿಗೂ ಇ-ಖಾತಾ ಸಿಗುವಂತೆ ಸರಳ ನಿಯಮ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವ್ಯವಸ್ಥೆ ಸುಧಾರಿಸಲು ಕ್ರಮ:
ಬಿಬಿಎಂಪಿಯಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ. ಇದರಿಂದಾಗಿ ಹೊಸ ಸುಧಾರಣೆ ಅಳವಡಿಸಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಸೇವೆ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಈ-ಖಾತಾಗಾಗಿ ಪಾಲ;ಇಕೆ ಎಆರ್‌ಒ ಸಂಪರ್ಕಿಸಿ:
* ಸ್ವತ್ತಿನ ಅಂತಿಮ ಇ-ಖಾತಾ ಪಡೆಯಲು ಆನ್‌ಲೈನ್ ಮೂಲಕ ಆಧಾರ್ ಇ-ಕೆವೈಸಿ, ಸ್ವತ್ತಿನ ಜಿಪಿಎಸ್, ಸ್ವತ್ತಿನ ಫೋಟೋ, ಸ್ವತ್ತಿನ ನೋಂದಾಯಿತ ದಸ್ತಾವೇಜು, ಸ್ವತ್ತಿನ ಇ.ಸಿ ದಿನಾಂಕ 2004ರ ಏ.1ರಿಂದ ಈವರೆವಿಗೂ, ಬೆಸ್ಕಾಂ ಮೀಟರ್ ಸಂಖ್ಯೆ, ಎ-ಖಾತಾ ಧೃಡೀಕರಿಸುವ ಸಂಬಂಧ ಹೆಚ್ಚುವರಿ ಇನ್ನಿತರ ದಾಖಲಾತಿ ಅಂಶವನ್ನು ಒದಗಿಸಬೇಕು.
* ಮೇಲಿನ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಯಮದಂತೆ ಅಂತಿಮ ಇ-ಖಾತಾ ಪಡೆಯಲು ವೈಯಕ್ತಿಕವಾಗಿ ಸಂಬಂಧಿಸಿದ ಎಆರ್‌ಒ ಭೇಟಿ ಮಾಡಬಹುದು.
* ಸ್ವತ್ತಿನ ಮಾಲೀಕರು ಅಂತಿಮ ಇ -ಖಾತಾ ವಿತರಿಸದಂತೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಕರಡು ಇ-ಖಾತಾ ರಚಿಸಿದ 7 ದಿನದೊಳಗೆ ಆಕ್ಷೇಪಣೆ ಅವಧಿ ನಿಗದಿಪಡಿಸಲಾಗಿದೆ. ಎಆರ್‌ಒ ಆಕ್ಷೇಪಣೆಯ ವಿಚಾರಣೆ ನಡೆಸಿ ನಿರ್ಧರಿಸಲಿದ್ದಾರೆ.