

ಮಂಡ್ಯ: ದೈಹಿಕವಾಗಿ ಚೆನ್ನಾಗಿದ್ದು ಮಾನಸಿಕವಾಗಿ ಕುಗ್ಗಿರುವವರು ಕೂಡ ಒಂದು ರೀತಿಯಲ್ಲಿ ವಿಕಲಚೇತನರೇ. ಹಾಗಾಗಿ ಯಾವುದೇ ಕಾರಣಕ್ಕೂ ವಿಕಲಚೇತನರು ಸಾಧನೆಯ ಹಾದಿಯಿಂದ ಹಿಂದೆ ಸರಿಯಬಾರದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಅಲಿಂಕೋ ಸಂಸ್ಥೆ, ಗ್ರಾಮೀಣ ಪುನರ್ವಸತಿ ಯೋಜನೆ ಕಾರ್ಯಕರ್ತರು ಮತ್ತು ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರು ಸಾಧನೆಯ ಹಾದಿಯಿಂದ ಹಿಂದೆ ಸರಿಯಬಾರದು. ಮನುಷ್ಯ ಎಂದ ಮೇಲೆ ನ್ಯೂನತೆಗಳು ಸಹಜವಾಗಿ ಇದ್ದೇ ಇರುತ್ತವೆ. ದೈಹಿಕವಾಗಿ ನ್ಯೂನತೆ ಹೊಂದಿರುವವರನ್ನು ವಿಶೇಷಚೇತನರು ಎಂದು ಕರೆದು ಗೌರವಿಸಬೇಕು ಎಂದು ತಿಳಿಸಿದರು.
ವಿಕಲಚೇತನರನ್ನು ಯಾರು ಕೂಡ ಅಂಗವಿಕಲರು ಎಂದು ಕರೆಯಬಾರದು. ಪ್ರತಿಯೊಬ್ಬರಿಗೂ ಕೂಡ ದೈಹಿಕ ಮತ್ತು ಮಾನಸಿಕವಾಗಿ ನ್ಯೂನತೆ ಎನ್ನುವುದು ಇರುತ್ತದೆ. ಅದರಲ್ಲಿ ದೈಹಿಕವಾಗಿ ನ್ಯೂನತೆ ಇರುವವರೇ ವಿಕಲಚೇತನರು. ಆದ್ದರಿಂದ ಅವರನ್ನು ಅಂಗವಿಕಲರು ಎನ್ನದೇ ವಿಶೇಷಚೇತನರೆಂದು ಗೌರವ ನೀಡಿ. ನಾವು ಕೂಡ ಬಲಶಾಲಿಗಳೇ, ನಾವು ಏನು ಬೇಕಾದರೂ ಸಾಧನೆ ಮಾಡುತ್ತೇವೆ ಎಂಬ ಆತ್ಮಸ್ಥೈರ್ಯವನ್ನು ಮನದಟ್ಟು ಮಾಡಿಕೊಂಡು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಜೀವಿಸುವ ಹಕ್ಕಿದೆ. ಸರ್ಕಾರದಿಂದ ಬಂದಂತಹ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಯಾವುದೋ ಒಂದು ನ್ಯೂನತೆ ನಮ್ಮನ್ನು ಆವರಿಸಿಕೊಂಡಿದೆ ಎಂದು ಅದೇ ಬೇಸರದಲ್ಲಿ ಜೀವನ ಕಳೆಯುವುದಕ್ಕಿಂತ ನ್ಯೂನತೆಯನ್ನು ಮೆಟ್ಟಿ ನಿಂತು ನಿಮ್ಮಲ್ಲಿರುವ ಚೈತನ್ಯವನ್ನು ಬಳಸಿಕೊಂಡು ಮುಂದೆ ಬಂದು ಸಾಧನೆ ಮಾಡಬೇಕು. ವಿಕಲಚೇತನರಿಗೆ ಭವಿಷ್ಯ ಹಾಗೂ ಜೀವನ ಕಟ್ಟಿಕೊಳ್ಳುವದಕ್ಕೆ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಸಹಾಯ ಮಾಡುತ್ತಿವೆ. ಅಂತಹ ಸಂಘ ಸಂಸ್ಥೆಗಳ ಶ್ರಮ ನಿಜಕ್ಕೂ ಶ್ಲಾಘನೀಯವಾದದ್ದು. ವಿಕಲಚೇತನರಿಗೆ ಅನುಕಂಪಕ್ಕೆ ಮಾತ್ರ ಸೀಮಿತ ಮಾಡದೇ, ಬದಲಾಗಿ ಅವಕಾಶಗಳನ್ನು ನೀಡಬೇಕು ಹಾಗೂ ಅವರನ್ನು ಬೇರೆಯವರಂತೆ ಕಾಣದೇ ಅವರು ಕೂಡ ನಮ್ಮಂತಯೇ ಎನ್ನುವಂತೆ ಭಾವಿಸಿ ಅವರಿಗೆ ಅವರಲ್ಲಿರುವ ವಿಶೇಷ ಶಕ್ತಿಯ ಬಗ್ಗೆ ಅರಿವು ಮೂಡಿಸಿ ಅವರಿಗೆ ವಿವಿಧ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದರು.
ಬೆಂಗಳೂರು ಅಲಿಂಕೋ ಸಂಸ್ಥೆಯ ವತಿಯಿಂದ ಜಿಲ್ಲೆಯ ವಿಶೇಷ ವಿಕಲಚೇತನರಿಗಾಗಿ 90 ಲಕ್ಷ ರೂ ವೆಚ್ಚದಲ್ಲಿ ಅವಶ್ಯವಿರುವ ವಿವಿಧ ಸಾಧನಗಳನ್ನು ವಿತರಣೆ ಮಾಡುತ್ತಿದ್ದಾರೆ. ಮಂಡ್ಯ ಮತ್ತು ಮದ್ದೂರು ಎರಡು ತಾಲೂಕುಗಳ ವಿಕಲಚೇತನರಿಗೆ 33 ಲಕ್ಷ ರೂ ವೆಚ್ಚದಲ್ಲಿ 556 ಜನರಿಗೆ ವೀಲ್ ಚೇರ್, ನಡಿಗೆ ಕೋಲು, ಶ್ರವಣ ಸಾಧನ ಸೇರಿದಂತೆ ಅವಶ್ಯವಿರುವ ವಿವಿಧ ಸಾಧನಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯೊಬ್ಬರೂ ಭಾಗಿಯಾಗಬೇಕು. ಇದು ಜಿಲ್ಲೆಯ ಸಮ್ಮೇಳನವಲ್ಲ, ಪ್ರತಿಯೊಬ್ಬ ಕನ್ನಡಿಗರ ಮನ ಮನೆಯ ಹಬ್ಬದಂತೆ ಆಚರಣೆ ಮಾಡಬೇಕು. ವಿಶ್ವ ವಿಕಲಚೇತನರ ದಿನಾಚರಣೆಯಂದು ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವಿವಿಧ ಸಾಧನ ಸಲಕರಣೆಗಳನ್ನು ವಿತರಣೆ ಮಾಡುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ನಾವು ವಿಕಲಚೇತನರು, ನಮಗೆ ಏನು ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಹಿಂದೆ ಸರಿಯದೆ ನಾವು ಏನನ್ನಾದರೂ ಸಾಧಿಸುತ್ತೇವೆ ಎಂಬ ಛಲದಿಂದ ಮುಂದೆ ಬರಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್ಕುಮಾರ್, ಬೆಂಗಳೂರು ಅಲಿಂಕೋ ಸಂಸ್ಥೆಯ ಅಧ್ಯಕ್ಷ ಲಿತಿನ್ ಸರ್ಕಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿರುವ ವಿಕಲಚೇತನರಿಗೆ ಸನ್ಮಾನ ಮಾಡಲಾಯಿತು. ದಿನಾಚರಣೆ ಅಂಗವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.