

ಬೇಲೂರು: 28 ವರ್ಷದ ಮಹಿಳೆಯೊಬ್ಬರಿಗೆ ಕರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ದಾವೂದ್ ಸಾಬ್ ಬೀದಿಯನ್ನು ಸ್ವಚ್ಛಗೊಳಿಸಿ, ಸಂಪೂರ್ಣ ಸ್ಯಾನಿಟೈಸೇಷನ್ ಮಾಡಿದ ನಂತರ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಬುಧವಾರ ಸೀಲ್‌ಡೌನ್ ಮಾಡಲಾಯಿತು.
ಸೋಂಕಿತ ಮಹಿಳೆ ಇದ್ದ ಪಟ್ಟಣದ ದಾವೂದ್ ಸಾಬ್ ಬೀದಿಯನ್ನು ಸೀಲ್‌ಡೌನ್ ಮಾಡಿರುವ ವಿಷಯ ತಿಳಿದ ಪಟ್ಟಣದ ಜನತೆ, ಕರೊನಾ ಪಟ್ಟಣಕ್ಕೂ ವಕ್ಕರಿಸಿತು ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಕಳೆದ 10 ದಿನಗಳ ಹಿಂದೆ ಬಂದಿದ್ದ 28 ವರ್ಷದ ಮಹಿಳೆ, ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತಿದ್ದರು. ಇವರ ಗಂಟಲು ದ್ರವದ ಮಾದರಿಯನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಪರೀಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಪ್ರಯೋಗಾಲಯದಿಂದ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಕೋವಿಡ್ ವೈದ್ಯಾಧಿಕಾರಿ ಡಾ.ನರಸೇಗೌಡರು ಸೋಂಕಿತರನ್ನು ಚಿಕಿತ್ಸೆಗಾಗಿ ಆಂಬುಲೆನ್ಸ್ ವಾಹನದಲ್ಲಿ ಹಾಸನದ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲದೆ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 23 ಜನರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 27 ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ನೇತೃತ್ವದ ತಂಡ, ದಾವೂದ್ ಸಾಬ್ ಬೀದಿಯನ್ನು ಸಂಪೂರ್ಣ ಸ್ವಚ್ಛತೆಯೊಂದಿಗೆ ಸ್ಯಾನಿಟೈಸ್ ಮಾಡಿ, ಅಕ್ಕಪಕ್ಕದ ಮನೆಯವರು ಯಾರೂ ಮನೆಯಿಂದ ಹೊರಬಾರದಂತೆ ತಿಳಿಸಿ ಕರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಬೆಂಗಳೂರಿನಿಂದ ಬಂದಿದ್ದ ಮಹಿಳೆಗೆ ಜ್ವರ ಬಂದ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಲ್ಲಿಂದ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕಳುಹಿಸಿ, ಮಹಿಳೆ ಎಲ್ಲೆಲ್ಲಿಗೆ ಹೋಗಿದ್ದರು ಎಂಬ ಮಾಹಿತಿ ಪಡೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೀದಿಯನ್ನು ಸೀಲ್‌ಡೌನ್ ಮಾಡಿದ್ದೇವೆ. ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರವನ್ನು ಕಾಪಾಡುವಂತೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಕೋವಿಡ್ ವೈದ್ಯಾಧಿಕಾರಿ ಡಾ.ಹಬೀಬುಲ್ಲ, ಡಾ.ಫೌಜಿಯಾ ಖಾನಂ, ಪುರಸಭೆ ಪರಿಸರ ಇಂಜಿನಿಯರ್ ಮಧುಸೂದನ್, ಆರೋಗ್ಯ ಸಹಾಯಕ ದಯಾನಂದ್ ಹಾಗೂ ಆರೋಗ್ಯ ಇಲಾಖೆ ಮತ್ತು ಪುರಸಭೆ ಸಿಬ್ಬಂದಿ ಇದ್ದರು.