

ಡಿ.ಎಂ.ಮಹೇಶ್, ದಾವಣಗೆರೆ
ಎಲ್ಲಿಯೇ ಪರಿಸರ ಪೂರಕ ಚಟುವಟಿಕೆಗಳಿರಲಿ, ಯಾರೇ ಆಹ್ವಾನ ನೀಡಿದರೂ ಹಾಜರಾಗಿ ಸದ್ದಿಲ್ಲದೇ ಗಿಡ ನೆಡಲು ಅಗತ್ಯ ಸಹಕಾರ ನೀಡಿ ಬರುವ ವಿಶಿಷ್ಟ ವೃಕ್ಷಪ್ರೇಮಿಯೊಬ್ಬರು ದಾವಣಗೆರೆಯಲ್ಲಿದ್ದಾರೆ.
ಇವರ ವೃತ್ತಿ ಔಷಧ ವ್ಯಾಪಾರವಾದರೂ ಪರಿಸರ ಕಾರ್ಯಕ್ರಮ, ಸಮಾಜಸೇವೆಯೇ ಇವರ ಪ್ರವೃತ್ತಿ. ಎರಡು ದಶಕಕ್ಕೂ ಹೆಚ್ಚು ಕಾಲ ಪರಿಸರ ಪರ ಕೆಲಸ ಮಾಡಿದ್ದಾರೆ. ಬೇಸಿಗೆ ಅಲ್ಲದೆ ಎಲ್ಲ ಋತುವಲ್ಲೂ ಪಕ್ಷಿಗಳು ಗೂಡು ಕಟ್ಟಿಕೊಂಡು ಬದುಕಲು ಮಹಡಿ ಮನೆ ಮೇಲೆ ಮಡಕೆಗಳನ್ನು ಇರಿಸಿದ್ದಾರೆ. ನಿತ್ಯ ಅವಕ್ಕೆ ಕಾಳು- ನೀರು ಹಾಕುವುದರೊಂದಿಗೆ ಇವರ ದಿನಚರಿ ಶುರು!
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮ ಮೂಲದ, ದಾವಣಗೆರೆ ಎಸ್‌ಎಸ್ ಬಡಾವಣೆ ನಿವಾಸಿ ಟಿ. ವಸಂತ್ ಈ ಪರಿಸರಪ್ರೇಮಿ. ಎ.ಎಲ್.ತಿಮ್ಮಪ್ಪ ಶ್ರೇಷ್ಟಿ-ಅನಸೂಯಮ್ಮ ದಂಪತಿಯ ಮಗನಾದ ಅವರಿಗೆ ಬಾಲ್ಯದಿಂದಲೇ ಗಿಡಗಳನ್ನು ನೆಟ್ಟು ಬೆಳೆಸುವ ಪ್ರೀತಿ ಮೊಳೆತಿದ್ದು, ಇದೀಗ ಹೆಮ್ಮರವಾಗಿ ಬೆಳೆದಿದೆ.
ಅಕ್ಷಯ ಏಜೆನ್ಸೀಸ್ ಹೋಲ್‌ಸೇಲ್ ಫಾರ್ಮಾ ನಡೆಸುತ್ತಿರುವ ವಸಂತ್, ವರ್ಷಕ್ಕೆ ಸುಮಾರು 30 ಸಾವಿರ ರೂ.ನಷ್ಟು ವೆಚ್ಚವನ್ನು ಪರಿಸರಪೂರಕ ಕೆಲಸಗಳಿಗೆ ತೆಗೆದಿಡುತ್ತಿದ್ದಾರೆ. ಶಾಲೆ-ಕಾಲೇಜು, ರಸ್ತೆ-ಉದ್ಯಾನ ಮೊದಲಾದೆಡೆ ಯಂತ್ರ ಮುಖೇನ ಗುಣಿ ತೆಗೆಸಿ, ಗಿಡಗಳನ್ನು ನೆಟ್ಟು ಅವಕ್ಕೆ ಕಟ್ಟಿಗೆಯ ಬೆಂಬಲ ನೀಡುವ ಹಂತದವರೆಗೂ ಮುತುವರ್ಜಿ ವಹಿಸುತ್ತಾರೆ.
27 ವರ್ಷದಿಂದ ಎಸ್‌ಎಸ್ ಬಡಾವಣೆ ಎ ಮತ್ತು ಬಿ ಬ್ಲಾಕ್, ಗುಂಡಿ ಮಹದೇವಪ್ಪ ಛತ್ರ, ಬನಶಂಕರಿ ಬಡಾವಣೆ, ಡಾಲರ್ಸ್ ಕಾಲನಿ ಹೀಗೆ ಅನೇಕ ರಸ್ತೆ, ಬಡಾವಣೆಗಳಲ್ಲಿ ಗಿಡ ನೆಟ್ಟು ಪಾಲನೆ ಮಾಡಿದ್ದೇನೆ. ಅಯೋಧ್ಯೆ, ಕಾಶಿ, ಉಡುಪಿ. ಹೀಗೆ ಹೋದೆಡೆಯೆಲ್ಲಲ್ಲ ಒಂದೆರಡು ಗಿಡ ನೆಟ್ಟು ಬಂದಿದ್ದೇನೆ. ಪರಿಸರಕ್ಕಾಗಿ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡು ಎಂದು ತಾತ ಆರ್.ವಿ. ಲಕ್ಷ್ಮೀಪತಿಯಪ್ಪ ಹೇಳುತ್ತಿದ್ದುದೇ ನನಗೆ ಪ್ರೇರಣೆ ಎಂದು ಸ್ಮರಿಸಿಕೊಳ್ಳುತ್ತಾರೆ.
ಜಿಲ್ಲಾಧಿಕಾರಿ ಅಮರನಾರಾಯಣ ಅವರೊಂದಿಗೆ ಚಿತ್ರದುರ್ಗ ಜಿಲ್ಲೆಯ ಪರಿಮಳ ವನದಲ್ಲಿ ಗಿಡ ನೆಟ್ಟಿರುವ ವಸಂತ್, ದೊಡ್ಡಬಾತಿ-ಜಗಳೂರಿನ ಬೆಟ್ಟ ಗುಡ್ಡಗಳಲ್ಲಿ ಸ್ನೇಹಿತರೊಟ್ಟಿಗೆ ಬೀಜದುಂಡೆಗಳನ್ನು ಎಸೆಯುವ ಕಾರ್ಯದಲ್ಲೂ ಭಾಗಿಯಾಗಿದ್ದರು.
ಇಬ್ಬರು ಮಕ್ಕಳ ಜನ್ಮದಿನದ ಹಿನ್ನೆಲೆಯಲ್ಲಿ ದೇಗುಲಕ್ಕೆ ಹಸುದಾನ, ಹುಲ್ಲು ವಿತರಣೆ, ಬಡವರಿಗೆ ತರಕಾರಿ ಗಾಡಿಗಳು, ವೃದ್ಧಾಶ್ರಮ-ಅನಾಥಾಶ್ರಮದ ವೃದ್ಧರಿಗೆ ಹೊದಿಕೆ ಇತರೆ ಸಾಮಗ್ರಿ, ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದ್ದಾರೆ. ಕೆಲವು ಶಾಲಾವರಣದಲ್ಲಿ ಸಿಮೆಂಟಿನ ಬೆಂಚುಗಳನ್ನು ಒದಗಿಸಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ ಔಷಧಗಳನ್ನು ನೀಡಿದ್ದಾರೆ.
ಅರಿವು ಬಳಗ, ಔಷಧ ವ್ಯಾಪಾರಿಗಳ ಸಂಘ, ಕೊಟ್ಟೂರು ಪಾದಯಾತ್ರೆ ಸಮಿತಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ಕ್ಲೀನ್ ಆ್ಯಂಡ್ ಗ್ರೀನ್ ಸೊಸೈಟಿ, ಕರುಣಾ-ಪ್ರಕೃತಿ ಮೊದಲಾದ ಸಂಸ್ಥೆಗಳಲ್ಲಿಯೂ ಗುರುತಿಸಿಕೊಂಡು ಅಲ್ಲಿಯೂ ಪರಿಸರ ಪೂರಕ ಕಾರ್ಯಕ್ರಮಗಳ ಛಾಪು ಮೂಡಿಸಿದ್ದಾರೆ. ಸಂಘಟನೆಗಳ ಮುಖಂಡರು ಬೆಂಬಲಿಸಿದ್ದಾರೆ. ಪತ್ನಿ ವಾಣಿ ಸಾಥ್ ನೀಡಿದ್ದಾರೆ.
ಈ ಬಾರಿ ಗಿಡಗಳು ಸಿಗುತ್ತಿಲ್ಲ. ಶಿಕಾರಿಪುರದಿಂದ ತರಿಸುತ್ತಿದ್ದೇವೆ. ಪುನೀತ್ ರಾಜಕುಮಾರ್ ಲೇಔಟ್, ಬನಸಿರಿ ಲೇಔಟ್ ಇತರೆಡೆಗಳಲ್ಲಿ ಗಿಡಗಳನ್ನು ಹಾಕುತ್ತಿದ್ದೇವೆ. ಈ ಹಿಂದೆ ಹಾಕಿದ್ದವು ಕೆಲವೆಡೆ ಬೆಳೆದಿಲ್ಲ. ಗಿಡಗಳ ಪಾಲನೆ ಮಾಡುವ ಬದ್ಧತೆ ಇದ್ದಲ್ಲಿ ಮಾತ್ರವೇ ಈ ಬಾರಿ ಗಿಡಗಳನ್ನು ನೆಡುವ ಉದ್ದೇಶ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ವಸಂತ್.
---
ಕೋಟ್..
ನಾನು ಬರಗಾಲದ ಪ್ರದೇಶದವನು. ಹೀಗಾಗಿ ನನಗೆ ಮರಗಳ ಮೌಲ್ಯ ತಿಳಿದಿದೆ. ಮರಗಳಿದ್ದರೇನೆ ಮಳೆ, ಸಮೃದ್ಧಿ ಕಾಣಬಹುದು. ಮನೆಗೊಂದೋ, ಎರಡೋ ಗಿಡಗಳನ್ನು ನೆಟ್ಟು ಪಾಲನೆ ಮಾಡಿದರೆ ಇಡೀ ರಾಜ್ಯದಲ್ಲಿ ಸಸ್ಯ ಸಂಪತ್ತು ಹೆಚ್ಚಲಿದೆ. ಮರಗಳಿಗೆ ಕೊಡಲಿ ಹಾಕದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು.
ಟಿ. ವಸಂತ್
ಪರಿಸರಪ್ರೇಮಿ