

ದಾವಣಗೆರೆ: ಈದ್‌ಮಿಲಾದ್ ಹಬ್ಬದ ಆಚರಣೆ ಹಿನ್ನಲೆಯಲ್ಲಿ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆ. 16ರಂದು ದಾವಣಗೆರೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮತ್ತು ವಾಹನ ನಿಲುಗಡೆ ಸ್ಥಳಾಂತರ ಮಾಡಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶ ಮಾಡಿದ್ದಾರೆ.
ಸೆ. 16ರಂದು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಹೈಸ್ಕೂಲ್ ಮೈದಾನದಲ್ಲಿನ ತಾತ್ಕಾಲಿಕ ಖಾಸಗಿ- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ಹರಿಹರದಿಂದ ಬಾತಿ ಮೂಲಕ ಹಳೇ ಪಿ.ಬಿ ರಸ್ತೆಯಲ್ಲಿ ಬರುವ ಭಾರಿ ವಾಹನಗಳು, ಖಾಸಗಿ-ಕೆಎಸ್‌ಆರ್‌ಟಿಸಿ ಬಸ್ಸುಗಳು ಹರಿಹರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 48 ನಲ್ಲಿ ಚಲಿಸಿ ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಬಂದು ಎಪಿಎಂಸಿಯ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಪ್ರಯಾಣಿಕರನ್ನು ಇಳಿಸಿ ಅದೇ ಮಾರ್ಗವಾಗಿ ಮರಳಿ ಕಾರ್ಯ ನಿರ್ವಹಿಸಬೇಕು.
ಚಿತ್ರದುರ್ಗ (ರಾ.ಹೆ-48) ಮತ್ತು ಸಂತೆಬೆನ್ನೂರು (ಬೀರೂರು-ಸಮ್ಮಸಗಿ ರಸ್ತೆ) ಮಾರ್ಗವಾಗಿ ಬರುವ ಭಾರಿ ವಾಹನಗಳು, ಬಸ್‌ಗಳು ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ಎಪಿಎಂಸಿಯ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಪ್ರಯಾಣಿಕರನ್ನು ಇಳಿಸಿ ಇದೇ ಮಾರ್ಗದಲ್ಲಿ ಕಾರ್ಯ ನಿರ್ವಹಿಸಬೇಕು.
ಜಗಳೂರು-ಕಂಚಿಕೆರೆ ಮಾರ್ಗವಾಗಿ ಬರುವ ವಾಹನಗಳು ಬೇತೂರು ಹಳ್ಳದ ಹತ್ತಿರದ ನೂತನ ಕೆಎಸ್‌ಆರ‌್ಟಿಸಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ವಾಪಾಸ್ ಹೊರಡಬೇಕು.
ಚನ್ನಗಿರಿ ಕಡೆಯಿಂದ ಹದಡಿ ರಸ್ತೆ ಮೂಲಕ ಬರುವ ವಾಹನಗಳು ಹದಡಿ ಅಂಡರ್‌ಪಾಸ್ ಮೂಲಕ ಹದಡಿ ರಸ್ತೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಪ್ರಯಾಣಿಕರನ್ನು ಇಳಿಸಿ ಇದೇ ಮಾರ್ಗದಲ್ಲಿ ಚಲಿಸಬೇಕು.
ಶಾಮನೂರು ಬೈಪಾಸ್ ಮೂಲಕ ಬರುವ ವಾಹನಗಳು ಶಾರದಾಂಭ ವೃತ್ತದ ಮೂಲಕ ಬಾಲಾಜಿ ವೃತ್ತದ ಕಡೆ ಚಲಿಸಿ ಜಿ.ಎಂ.ಐ.ಟಿ ಕಾಲೇಜು ಕಡೆ ಚಲಿಸಬೇಕು. ಕೊಂಡಜ್ಜಿ ಮಾರ್ಗದ ವಾಹನಗಳು ಆರ್‌ಟಿಒ ವೃತ್ತದವರೆಗೆ ಬಂದು ಪ್ರಯಾಣಿಕರನ್ನು ಇಳಿಸಿ ಇದೇ ಮಾರ್ಗದಲ್ಲಿ ತೆರಳಬೇಕು ಎಂದು ಆದೇಶಿಸಿದ್ದಾರೆ.
--