ರಾಜ್ಯಪಾಲರ ನಡೆಗೆ ಅಹಿಂದ ಆಕ್ರೋಶ, ದಾವಣಗೆರೆಯಲ್ಲಿ ರಸ್ತೆ ತಡೆ

1000320996_20240818000650158.jpg
Published on

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿ ಅಹಿಂದ, ಶೋಷಿತ ಸಮುದಾಯಗಳ ಮುಖಂಡರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಜಮಾಯಿಸಿದ ಮುಖಂಡರು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಮಹಾತ್ಮ ಗಾಂಧಿ ವೃತ್ತದವರೆಗೆ ಸಾಗಿ ಅಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಅವರ ಪ್ರತಿಕೃತಿ ದಹನ ಮಾಡಿದರು. ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರ್ಣಯ ಕೈಗೊಂಡಿರುವ ರಾಜ್ಯಪಾಲರ ಕ್ರಮ ಖಂಡನೀಯ. ಅವರು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು ಎಂದ ಮುಖಂಡರು, ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು.
ಇದಕ್ಕೂ ಮುನ್ನ ಜಿಲ್ಲಾ ಕುರುಬ ಸಮಾಜ ಹಾಸ್ಟೆಲ್‌ನಲ್ಲಿ ಸಭೆ ಸೇರಿದ್ದ ಮುಖಂಡರು ರಾಜ್ಯಪಾಲರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ದಿಢೀರ್ ಪ್ರತಿಭಟನೆಗೆ ನಿರ್ಧರಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನಪ್ರಿಯರಾದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಮೊದಲಿನಿಂದಲೂ ಸಿದ್ದರಾಮಯ್ಯ ಅವರ ತೇಜೋವಧೆ ನಡೆದಿದೆ. ಈಗ ರಾಜಭವನ ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಈ ಧೋರಣೆ ನಿಲ್ಲಿಸದಿದ್ದರೆ ಮುಂಬರುವ ದಿನದಲ್ಲಿ ರಾಜ್ಯವ್ಯಾಪಿ ಹೋರಾಟ ಮುಂದುವರಿಯಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ವಿವಿಧ ಸಮಾಜದ ಮುಖಂಡರಾದ ಮಂಜುನಾಥ ಇಟ್ಟಿಗುಡಿ, ಅನಂತನಾಯ್ಕ, ಹೊದಿಗೆರೆ ರಮೇಶ್, ಬಿ. ವೀರಣ್ಣ, ಅಯೂಬ್ ಪೈಲ್ವಾನ್, ಕತ್ತಲಗೆರೆ ತಿಪ್ಪಣ್ಣ, ಎ.ಕೆ. ನಾಗಪ್ಪ, ಸಿದ್ದಪ್ಪ, ಎ. ನಾಗರಾಜ್, ಎಚ್. ಬಿ. ಪರಶುರಾಮಪ್ಪ, ಲಿಂಗರಾಜ್, ದೀಪಕ್ ಜೋಗಪ್ಪನವರ್, ಪುರಂದರ ಲೋಕಿಕೆರೆ, ಎಸ್.ಎಸ್. ರವಿಕುಮಾರ್, ಯಕ್ಕನಹಳ್ಳಿ ಅನಂದಪ್ಪ, ರಾಮಚಂದ್ರ, ಚಮನ್‌ಸಾಬ್. ಎಸ್.ಮಲ್ಲಿಕಾರ್ಜುನ್, ಪೈಲ್ವಾನ್ ಸಂಗಪ್ಪ, ಕುಂಬಳೂರು ವಿರುಪಾಕ್ಷಪ್ಪ, ದೀಟೂರು ಚಂದ್ರು, ಬಿ.ಎಚ್. ಉದಯಕುಮಾರ್, ಚೆಲುವಪ್ಪ, ಜಯಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net