

ದಾವಣಗೆರೆ: ಯತ್ನಾಳ್ ಅವರ ಹರಕುಬಾಯಿ, ಹೊಲಸು ನಾಲಿಗೆ ಮತ್ತು ನಡವಳಿಕೆಗಳಿಂದಾಗಿಯೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದ್ದಾರೆ.
ಶಿರಮಗೊಂಡನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ಹರಕು ಬಾಯಿಯಿಂದಾಗಿಯೇ 2023ರ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಸೋಲಾಯಿತು. ಉಪಚುನಾವಣೆಗಳ ಹಿನ್ನಡೆಗೆ ವಿಜಯೇಂದ್ರ, ಯಡಿಯೂರಪ್ಪ ಕಾರಣರೆಂದು ಟೀಕಿಸಲು ಅವರಿಗೆ ನೈತಿಕತೆ ಇಲ್ಲ ಎಂದು ಹೇಳಿದರು.
ಶಿಗ್ಗಾಂವ್ ಕ್ಷೇತ್ರದಲ್ಲಿ ಮೂರು ದಿನ ಪ್ರವಾಸ ಮಾಡಿದ ನೀವೇಕೆ ಆ ಕ್ಷೇತ್ರವನ್ನು ಗೆಲ್ಲಿಸಲಿಲ್ಲ? ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಿದಾಗ ಕಣ್ಣೇ ಬಿಡದವರು ಟೀಕಿಸುವುದರಲ್ಲಿ ಅರ್ಥವಿಲ್ಲ. 2011ರಲ್ಲಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ ನಡೆಯಿತು. ವಿಧಾನಸಭೆ ಟಿಕೆಟ್ ತಪ್ಪಿದ್ದಕ್ಕೆ ಅವರ ವಿರುದ್ಧ ಟೀಕೆ ಮಾಡಲಾಗುತ್ತಿದೆ ಎಂದರು.
ವಿಜಯೇಂದ್ರ ಅವರ ವರ್ಚಸ್ಸಿನಿಂದಲೇ ರಾಜ್ಯದ 17 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಇನ್ನು ಮುಂದೆಯೂ ಅವರ ವಿರುದ್ಧ ಮಾತಾಡಿದರೆ ರಾಜ್ಯದ ಜನರೇ ಉತ್ತರ ಕೊಡುತ್ತಾರೆ. ಯತ್ನಾಳ್ ನಡೆ ವಿರುದ್ಧ ಕರಡುಪ್ರತಿ ತಯಾರಿಸಿದ್ದೇವೆ. ರಾಷ್ಟ್ರೀಯ ನಾಯಕರಿಗೆ ನಾವು ದೂರು ಕೊಡಲಿದ್ದೇವೆ ಎಂದೂ ಹೇಳಿದರು.
ಮುಖಂಡ ಮಾಡಾಳು ಮಲ್ಲಿಕಾರ್ಜುನ ಮಾತನಾಡಿ ಯತ್ನಾಳ್ ಅವರೇ ವ್ಯತ್ಯಾಸವಾಗಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆಗೆ ಬನ್ನಿ. ಆದರೆ ಕಾರ್ಯಕರ್ತರ ನೈತಿಕ ಸ್ಥೈರ್ಯ ಕದಡುವ ಕೆಲಸ ಮಾಡಬೇಡಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಬಿ.ಜಿ. ಅಜಯಕುಮಾರ್, ಚಂದ್ರಶೇಖರ ಪೂಜಾರ್, ಧನಂಜಯ ಕಡ್ಲೇಬಾಳ್, ಲೋಕಿಕೆರೆ ನಾಗರಾಜ್ ಇದ್ದರು.
---