

ದಾವಣಗೆರೆ : ಒಂದು ಕಾಲದ ಕರ್ನಾಟಕದ ಮ್ಯಾಂಚೆಸ್ಟರ್ ಹೆಗ್ಗಳಿಕೆಯ ದಾವಣಗೆರೆ ಜಿಲ್ಲೆ, ಮಂಗಳವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನತ್ತ ಆಸೆಗಣ್ಣು ಹಾಯಿಸಿದೆ. ಜಿಲ್ಲೆಯ ಆಶೋತ್ತರಗಳತ್ತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಮಾಲ್ ಮಾಡುವರೆ ಎಂಬ ನಿರೀಕ್ಷೆ ಮೂಡಿಸಿದೆ.
ಸಣ್ಣ ಪುಟ್ಟ ಉದ್ಯಮಗಳನ್ನು ಬಿಟ್ಟರೆ, ಕಳೆದ 55 ವರ್ಷದಿಂದ ದೊಡ್ಡ ಕೈಗಾರಿಕೆಗಳ ಭಾಗ್ಯ ಜಿಲ್ಲೆಗೆ ಒದಗಿಲ್ಲ. ಹರಿಹರದ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ ಇತಿಹಾಸ ಸೇರಿ 2 ದಶಕಗಳೇ ಕಳೆದಿವೆ. ಜವಳಿ ಮಿಲ್ಲುಗಳ ಊರು ಗತವೈಭವಕ್ಕೆ ಮರಳಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಲ್ಲಿದೆ.
ಜಿಲ್ಲೆಯ ನೂರಾರು ವಿದ್ಯಾವಂತ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮೈಸೂರಿನಂತಹ ಮೆಟ್ರೋಪಾಲಿಟನ್ ನಗರಗಳತ್ತ ಆಕರ್ಷಿತರಾಗುತ್ತಿದ್ದಾರೆ. ನಿರುದ್ಯೋಗದ ಕಂದಕ ನಿವಾರಣೆಗೆ ಬೃಹತ್ ಕೈಗಾರಿಕೆಗಳ ತುರ್ತು ಜಿಲ್ಲೆಗಿದೆ ಎಂಬುದು ಉದ್ಯಮಿ ಅಥಣಿ ವೀರಣ್ಣ ಅವರ ಮಾತು.
ಜತೆಗೆ ಎಸ್‌ಇಜೆಡ್ ನಿರ್ಮಾಣ, ಕೈಗಾರಿಕಾ ಕಾರಿಡಾರ್‌ನ ಅಗತ್ಯವಿದೆ. ಕೃಷಿ ಆಧಾರಿತ ಸಾರ್ವಜನಿಕ ಕೈಗಾರಿಕೆಗಳು, ಮುಖ್ಯವಾಗಿ ಫುಡ್ ಪಾರ್ಕ್ ಬರಬೇಕೆಂಬ ಆಶಯವೂ ಇದೆ. ಹೊಸ ಐಟಿ ಪಾರ್ಕ್ ಅಗತ್ಯವಿದ್ದು ಇದಕ್ಕೆ 500 ಕೋಟಿ ರೂ.ಗಳ ವಿಶೇಷಾನುದಾನದ ಬೇಡಿಕೆ ಇದೆ. ಜವಳಿ ಪಾರ್ಕ್ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ, ಬೃಹತ್ ಕೈಗಾರಿಕೆ ಘಟಕಗಳ ಆರಂಭಕ್ಕೆ ಲ್ಯಾಂಡ್ ಬ್ಯಾಂಕ್ ಬೇಕಿದೆ.
ರೈಲ್ವೆ, ಹೆದ್ದಾರಿ ಯೋಜನೆಗಳಿಗೆ 3 ಸಾವಿರ ರೂ. ಕೋಟಿ ರೂ. ನೆರವು ಬೇಕಿದೆ. ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗದ ಭೂಸ್ವಾಧೀನ ಕಾರ್ಯ ಚುರುಕಾಗಬೇಕು. ದಾವಣಗೆರೆಯ ನವೀಕೃತ ರೈಲು ನಿಲ್ದಾಣದ ಸಿಸಿಟಿವಿ ಕಣ್ಗಾವಲು ಹೆಚ್ಚಿಸಬೇಕಿದೆ ಎಂಬುದು ನೈಋತ್ಯ ರೈಲ್ವೆ ಪ್ರಯಾಣಿಕರ ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಅವರ ಮಾತು.
ದಾವಣಗೆರೆ ರೈಲು ನಿಲ್ದಾಣದ ಕಟ್ಟಡದ ಮುಖ್ಯ ದ್ವಾರದ ಬಳಿ ವಾಹನ ನಿಲುಗಡೆ, ರಿಸರ್ವೇಷನ್ ಟಿಕೆಟ್ ಕೌಂಟರ್, ಫುಡ್ ಕೋರ್ಟ್, ಎಟಿಎಂ, ವಾಶ್‌ರೂಂ, ಡಾರ್ಮಿಟರಿ ಒಳಗೊಂಡಂತೆ ಬಹುವಿಧದ ಸಂಕೀರ್ಣ ಆಗಬೇಕಿದೆ. ಪ್ರಯಾಣಿಕರಿಗೆ ಹೆಚ್ಚುವರಿ ಶೌಚಗೃಹಗಳು ಬೇಕಿವೆ. ದೈಹಿಕ ಅಂಗವಿಕಲರಿಗೆ ಇಳಿಜಾರು ವ್ಯವಸ್ಥೆ, ಬ್ಯಾಟರಿ ಚಾಲಿತ ಕಾರುಗಳು ಬೇಕಿವೆ. ನಿರೀಕ್ಷಣಾ ಕೊಠಡಿ ಅಗತ್ಯವಿದೆ.
ಜಗಳೂರು ತಾಲೂಕಿನ ನೀರಾವರಿಗೆ ಅನುಕೂಲ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಯಡಿ ಸರ್ಕಾರ ಘೋಷಿಸಿದ್ದ 5000 ಕೋಟಿ ರೂ. ಬಿಡುಗಡೆ ಮಾಡಿಲ್ಲ. ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಿತವಾಗಿದ್ದರಿಂದ 10 ಸಾವಿರ ಕೋಟಿ ರೂ. ನೀಡುವ ಮೂಲಕ ತುಂಗಾದಿಂದ ಭದ್ರಾಕ್ಕೆ ನೀರು ಹರಿಸುವ ಏತ ನೀರಾವರಿಗೆ ಸಹಕರಿಸಬೇಕು ಎಂಬುದು ರೈತ ಮುಖಂಡ ತೇಜಸ್ವಿ ಪಟೇಲ್ ಅವರ ಆಶಯ.
ಕನಿಷ್ಟ ಬೆಂಬಲ ಬೆಲೆ ನೀಡಲು ಆವರ್ತನಿಧಿ ಸ್ಥಾಪಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ, ಕೃಷಿ ಸ್ಟಾರ್ಟಪ್‌ಗಳಿಗೆ ನಿಯಮ ಸಡಿಲಿಸಿ ಉಚಿತವಾಗಿ ಸಾಲ ನೀಡಬೇಕು. ಮಣ್ಣಿನ ಆರೋಗ್ಯಕ್ಕಾಗಿ ಸಾವಯವ ಇಂಗಾಲ ಹೆಚ್ಚಿಸಲು ಪಶು ಸಂಗೋಪನೆಗೆ ಒತ್ತು ನೀಡಬೇಕು. ಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಾಲ ನಿಗದಿಯಾಗಬೇಕು. ಜಿಲ್ಲೆಯಲ್ಲಿ ಎಥೆನಾಲ್ ಉತ್ಪಾದನಾ ಘಟಕ ಟೇಕಾಫ್ ಆಗಲು ಕ್ಕೆ ಹಣ ಮಂಜೂರಾಗಬೇಕಿದೆ.
ನೆರೆಯ ಶಿವಮೊಗ್ಗ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳಿವೆ. ಆದರೆ ವ್ಯಾಪಾರೋದ್ಯಮಕ್ಕೆ ಪೂರಕ ವಾತಾವರಣವುಳ್ಳ ದಾವಣಗೆರೆ ಜಿಲ್ಲೆಯಲ್ಲಿ ಇದರ ನಿರ್ಮಾಣ ಆಗಬೇಕೆಂಬ ಕೂಗಿಗೆ ಇದುವರೆಗೂ ಸ್ಪಂದನೆ ದೊರೆತಿಲ್ಲ. ಸರ್ಕಾರ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮೂಲಕ ಚಾಲನೆ ನೀಡುವಂತಾದರೆ ಮುಂದಿನ ವರ್ಷಗಳಲ್ಲಿ ಲೋಹದ ಹಕ್ಕಿ ಜಿಲ್ಲೆಯಿಂದಲೂ ಹಾರುವ ಕನಸು ನನಸಾದೀತು. ಇದರಿಂದ ಪ್ರವಾಸೋದ್ಯಮದ ಬೆಳವಣಿಗೆ ಮತ್ತಷ್ಟು ಚಿಗುರಲಿದೆ ಎನುತ್ತಾರೆ ತೆರಿಗೆ ಸಲಹೆಗಾರರ ಸಂಘದ ವಲಯ ಉಪಾಧ್ಯಕ್ಷ ಜೆಂಬಗಿ ಎಸ್. ರಾಧೇಶ್.