

ಡಿ.ಎಂ. ಮಹೇಶ್, ದಾವಣಗೆರೆ:
ನಾಲ್ಕುನೂರು ಲೋಕಸಭಾ ಸ್ಥಾನಗಳನ್ನು ಗೆಲ್ಲುವತ್ತ ಕಣ್ಣಿಟ್ಟಿರುವ ಬಿಜೆಪಿ, ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಮತಬೇಟೆ ಮುಂದುವರಿಸಿದೆ. ಕರ್ನಾಟಕದಲ್ಲಿ ಪಕ್ಷದ ಪಾಲಿಗೆ ಸೂಕ್ಷ್ಮಎನಿಸಿಕೊಂಡಿರುವ ಕ್ಷೇತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿಸಿಕೊಂಡಿದ್ದಾರೆ.
ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಎರಡನೇ ಹಂತದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೇ ಪ್ರಧಾನಿ ಏ. 28 ರಂದು ಬಿಜೆಪಿ ಅಭ್ಯರ್ಥಿಯ ಪರವಾಗಿ ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಭಾನುವಾರ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ (ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ) ದೇಶದ ಚೌಕಿದಾರ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ನಗರ ಕಳೆಗಟ್ಟಿದೆ.
ಅಸಮಾಧಾನವಿದ್ದ ಕ್ಷೇತ್ರ ಆಯ್ಕೆ
ಅಸಮಾಧಾನವಿದ್ದ, ಗೆಲ್ಲುವ ಅವಕಾಶಗಳ ಆಧಾರದಲ್ಲಿ ಕ್ಷೇತ್ರಗಳನ್ನು ಆಯ್ದುಕೊಳ್ಳಲಾಗಿದ್ದು, ಅದರಲ್ಲಿ ಮಧ್ಯಕರ್ನಾಟಕದ ದಾವಣಗೆರೆಯೂ ಸೇರಿದೆ. ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿದ್ದರಿಂದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ, ಜಿ.ಕರುಣಾಕರ ರೆಡ್ಡಿ ಅಸಮಾಧಾನಗೊಂಡಿದ್ದರು. ಈಗ ಬಂಡಾಯ ಶಮನವಾಗಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಒಳಗಿನ ಬೇಗುದಿ, ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದೆಂಬ ಲೆಕ್ಕಾಚಾರ ಇದರ ಹಿಂದಿದೆ. ಮೋದಿ ಅವರು ಬಂದು ಪ್ರಚಾರ ಮಾಡಿದ ನಂತರ ಸರಿ ಹೋಗಲಿದೆ ಎನ್ನುವ ನಿರೀಕ್ಷೆ ಇದೆ.
ಕಳೆದ ಲೋಕಸಭಾ ಚುನಾವಣೆ ವೇಳೆಯೂ ಮೋದಿ ಪ್ರಚಾರಕ್ಕೆ ಬಂದದ್ದು, ಪಕ್ಷಕ್ಕೆ ಸಾಕಷ್ಟು ಅನುಕೂಲ ತಂದು ಕೊಟ್ಟಿತ್ತು.
ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ
ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ 650 ಅಡಿ ಉದ್ದ, 340 ಅಡಿ ಅಗಲ ವಿಸ್ತೀರ್ಣದ ಬೃಹತ್ ಪೆಂಡಾಲ್ ಅಳವಡಿಸಲಾಗಿದೆ. ಇದರಲ್ಲಿ ಜರ್ಮನ್ ಹ್ಯಾಂಗರ್ ಮಾದರಿ ಹಾಗೂ ಇಕ್ಕೆಲಗಳಲ್ಲಿ ಸಾಮಾನ್ಯ ಶಾಮಿಯಾನ ಸಿದ್ಧಗೊಂಡಿದೆ. ಮೈದಾನದಲ್ಲಿ ಮೋದಿ ಕಟೌಟ್‌ಗಳು, ಪಕ್ಷದ ಬಾವುಟಗಳು ರಾರಾಜಿಸುತ್ತಿವೆ.
36-60 ಅಡಿ ಸುತ್ತಳತೆಯ ಮುಖ್ಯ ವೇದಿಕೆ ನಿರ್ಮಾಣವಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ.ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸೇರಿ 51 ಜನ ಗಣ್ಯರಿಗೆ ಕೂರಲು ಅವಕಾಶ ಮಾಡಲಾಗಿದೆ.
ಒಟ್ಟು 1 ಲಕ್ಷ ಕುರ್ಚಿಗಳನ್ನು ಅಳವಡಿಸಬೇಕಿದೆ. ಇದುವರೆಗೆ 70 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಗಣ್ಯರು, ಸಾರ್ವಜನಿಕರೂ ಒಳಗೊಂಡು ಒಟ್ಟು 100 ಕಡೆ ಮೊಬೈಲ್ ಶೌಚಗೃಹ ಅಳವಡಿಸಲಾಗಿದೆ ಎಂದು ಬೆಂಗಳೂರಿನ ಟೆಂಟ್ ಆಯೋಜಕರು ವಿಜಯವಾಣಿಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಸುಮಾರು 3 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಬಂದವರಿಗೆ ಬಿಜೆಪಿ ಚಿಹ್ನೆಯುಳ್ಳ ಟೋಪಿ ಹಾಗೂ ಶಲ್ಯ ವಿತರಿಸಲು ಹಾಗೂ ಬಿಸಿಲಿನ ದಾಹ ತಣಿಸಲು ಪೆಂಡಾಲ್‌ನಲ್ಲಿ ಕುಡಿಯುವ ನೀರಿನ ಕ್ಯಾನ್‌ಗಳನ್ನು ಇರಿಸಲಾಗುತ್ತಿದೆ. ಕಾರ್ಯಕ್ರಮ ನಡೆಯುತ್ತಿರುವ ಸುತ್ತಮುತ್ತಲ ರಸ್ತೆಗಳಲ್ಲಿ ಗುಂಡಿಗಳನ್ನು ಡಾಂಬರ್ ಹಾಕಿ ಮುಚ್ಚುವ ಕಾರ್ಯ ಭರದಿಂದ ನಡೆಯುತ್ತಿದೆ.
ರಂಗೋಲಿಯಲ್ಲಿ ಐತಿಹಾಸಿಕ ಕ್ಷೇತ್ರ
ವೇದಿಕೆ ಎದುರಲ್ಲಿ ಸಂತೇಬೆನ್ನೂರು ಪುಷ್ಕರಣಿ, ಉಚ್ಚಂಗಿದುರ್ಗ ಕೋಟೆ, ಹರಿಹರೇಶ್ವರ ದೇವಸ್ಥಾನ ಮೊದಲಾದ ಜಿಲ್ಲೆಯ ಐತಿಹಾಸಿಕ ಕ್ಷೇತ್ರಗಳನ್ನು ರಂಗೋಲಿಯಲ್ಲಿ ಚಿತ್ರಿಸಲು ಸಿದ್ಧತೆ ನಡೆದಿದೆ.
ವೇದಿಕೆ ಎದುರು ಮೂರು ವಿಭಾಗಗಳನ್ನು ಮಾಡಲಾಗಿದೆ. ಒಂದೆಡೆ ಯುವ ಮತದಾರರು ಕೂರಲಿದ್ದಾರೆ. ಇನ್ನೊಂದೆಡೆ ವೈದ್ಯರು, ವಕೀಲರು ಸೇರಿ ವೃತ್ತಿಪರರು ಮತ್ತೊಂದೆಡೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿಗೆ ಆಸನಗಳನ್ನು ಸಜ್ಜುಗೊಳಿಸಲಾಗಿದೆ.
ಪೆಂಡಾಲ್‌ನಲ್ಲಿ ಒಟ್ಟು 10-12 ಅಡಿ ಎತ್ತರದ 10 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ವೇದಿಕೆ ಹಿಂಬದಿ 14-40 ಅಡಿ ವಿಸ್ತೀರ್ಣದ ಬ್ಯಾಕ್‌ಡ್ರಾಪ್ ಸ್ಕ್ರೀನ್ ವ್ಯವಸ್ಥೆಗೊಂಡಿದೆ. ಕಾರ್ಯಕರ್ತರು ಫೋಟೋ ಕ್ಲಿಕ್ಕಿಸಿಕೊಳ್ಳಲು ನಮೋ ಆ್ಯಪ್, ವಿಕಸಿತ ಭಾರತ ಕಿಯೋಸ್ಕ್‌ನ ಮಾದರಿಗಳನ್ನು ಅಳವಡಿಸಲಾಗಿದೆ.
ಹೈಸ್ಕೂಲ್ ಮೈದಾನದ ಪಕ್ಕದಲ್ಲಿದ್ದ ತಾತ್ಕಾಲಿಕ ಬಸ್ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಕೆಲವೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಮಾವೇಶಕ್ಕೆ ಬರುವ ವಾಹನಗಳಿಗೆ ನಾಲ್ಕು ಕಡೆ ನಿಲುಗಡೆ ವ್ಯವಸ್ಥೆ ಇದೆ