

ದಾವಣಗೆರೆ: ಗಣೇಶೋತ್ಸವಕ್ಕೆ ಇನ್ನು 40 ದಿನ ಬಾಕಿ ಇದೆ. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಾರ್ವಜನಿಕ ಗಣೇಶನ ವೀಕ್ಷಣೆಗೆ ಯಾವ ಆಕರ್ಷಣೆ ಇರಲಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ.
ಸಾರ್ವಜನಿಕ ಹಿಂದು ಮಹಾಗಣಪತಿ ಟ್ರಸ್ಟ್‌ನಿಂದ ಏಳನೇ ವರ್ಷದ ಅಂಗವಾಗಿ ಕಾಶಿ ವಿಶ್ವನಾಥನ ಕಾರಿಡಾರ್ ಮಾದರಿಯ ಮಹಾಮಂಟಪ ನಿರ್ಮಿಸಲಾಗುತ್ತಿದೆ. 100 ಅಡಿ ಉದ್ದ, 200 ಅಡಿ ಅಗಲ ಹಾಗೂ 20 ಅಡಿ ಎತ್ತರ ವಿಸ್ತೀರ್ಣದ ಈ ಭವ್ಯ ಮಂಟಪದ ಒಳಾಂಗಣದಲ್ಲೇ ಗಣೇಶನ ಪ್ರತಿಷ್ಠಾಪನೆಯಾಗಲಿದೆ.
ಇದಕ್ಕಾಗಿ 16 ಅಡಿ ಎತ್ತರದ ಶಿವನ ಅವತಾರದ ಗಣೇಶನ ಮೂರ್ತಿ ಬೆಳಗಾವಿಯಲ್ಲಿ ನಿರ್ಮಾಣವಾಗುತ್ತಿದೆ. ಬುಧವಾರದಿಂದ ಮಹಾಮಂಟಪ ನಿರ್ಮಾಣ ಕಾಮಗಾರಿ ನಡೆಯಲಿದ್ದು ಕೊಲ್ಕತ್ತಾದಿಂದ 30 ಮಂದಿ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಲಿದ್ದಾರೆ.
ಸೆ. 7ರಿಂದ ಅ. 5ರವರೆಗೆ 28 ದಿನಗಳ ಕಾಲ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಉದ್ದೇಶಿಸಲಾಗಿದೆ. ಮಹಾಮಂಟಪದ ಉದ್ಘಾಟನೆಗೆ ಕಾಶಿ ಪೀಠದ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬರುವ ನಿರೀಕ್ಷೆ ಇದೆ ಎಂದು ಸಾರ್ವಜನಿಕ ಹಿಂದು ಮಹಾಗಣಪತಿ ಟ್ರಸ್ಟ್‌ನ ಅಧ್ಯಕ್ಷ ಜೊಳ್ಳಿ ಗುರು ‘ವಿಜಯವಾಣಿ’ಗೆ ತಿಳಿಸಿದರು.
ಮಂಟಪ ನಿರ್ಮಾಣ ಹಿನ್ನೆಲೆಯಲ್ಲಿ ಕಾಶಿಗೆ ಭೇಟಿ ನೀಡಿ ಅಲ್ಲಿನ ವಿಶ್ವನಾಥನ ದೇಗುಲ, ಮೂರ್ತಿ ವೀಕ್ಷಣೆ ಮಾಡಿ ಬಂದಿದ್ದೇವೆ. ಅಲ್ಲಿನ ಗುರುಗಳನ್ನು ಸಂಪರ್ಕ ಮಾಡಿದ್ದೇವೆ ಎಂದ ಅವರು, ಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿ ವಿಸರ್ಜನೆ ದಿನಾಂಕ ಗಮನಿಸಿದ ಬಳಿಕವೇ ದಾವಣಗೆರೆಯಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುವುದು ಎಂದು ವಿವರಿಸಿದರು.
ಕರ್ನಾಟಕದ ಜನರು ತೀರ್ಥಯಾತ್ರೆಗೆ ಎಲ್ಲೆಡೆ ತೆರಳುತ್ತಾರೆ. ಉತ್ತರ ಭಾರತದ ಪುಣ್ಯಕ್ಷೇತ್ರಗಳನ್ನು ಕೆಲವರು ಮಾತ್ರ ವೀಕ್ಷಣೆ ಮಾಡಿದ್ದಾರೆ. ಅಲ್ಲಿಗೆ ತೆರಳಲಾಗದ ಭಕ್ತರು ಇಲ್ಲಿಯೇ ಕಾಶಿ ವಿಶ್ವನಾಥ ದೇಗುಲ ಮಾದರಿಯನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡುತ್ತಿದ್ದೇವೆ ಎಂದು ಹೇಳಿದರು.
ಹಂದರಕಂಬಕ್ಕೆ ಪಕ್ಷಾತೀತ ವಿಧ್ಯುಕ್ತ ಪೂಜೆ
ಉದ್ದೇಶಿತ ಮಹಾಮಂಟಪ ನಿರ್ಮಾಣ ಸಂಬಂಧ ಭಾನುವಾರ ಮಧ್ಯಾಹ್ನ ಹೈಸ್ಕೂಲ್ ಮೈದಾನದಲ್ಲಿ ಹಂದರಗಂಬದ ಪೂಜೆ ವಿಧ್ಯುಕ್ತವಾಗಿ ನಡೆಯಿತು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಸೇರಿ ವಿವಿಧ ರಾಜಕೀಯ ಮುಖಂಡರು, ಗಣ್ಯರು ಪಕ್ಷಾತೀತವಾಗಿ ಭಾಗಿಯಾಗಿ ಪೂಜಾ ವಿಧಿಗಳನ್ನು ನೆರವೇರಿಸಿದರು.
ರಾಜ್ಯದಲ್ಲಿ ಮಳೆ-ಬೆಳೆ ಸಮೃದ್ಧವಾಗಿದ್ದರಿಂದ ರೈತರ ಮೊಗದಲ್ಲಿ ಸಂತಸ ಕಾಣುತ್ತಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಗಣೇಶ ಹಬ್ಬದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸೋಣ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಶಿಸಿದರು.
ಮಾಜಿ ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ಹಿಂದಿನಿಂದ ಹಿಂದು ಮಹಾಗಣಪತಿ ಟ್ರಸ್ಟ್‌ನಿಂದ ಉತ್ತಮವಾಗಿ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಇನ್ನಷ್ಟು ಉತ್ತಮವಾಗಿ ಹಬ್ಬ ಮಾಡಲಿ ಎಂದು ಹೇಳಿದರು.
ಈ ಬಾರಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿವೆ. ರೈತರು ಖುಷಿಯಾಗಿದ್ದು ಸಮೃದ್ಧ ಬೆಳೆ ಬೆಳೆಯಲು ದೇವರು ಅನುಕೂಲ ಮಾಡಿಕೊಡಲಿ ಎಂದು ಬೇಡುತ್ತೇನೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಸಮಾಜಸೇವಕ ಕೆ.ಬಿ.ಶಂಕರನಾರಾಯಣ, ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಪಾಲಿಕೆ ಮಾಜಿ ಸದಸ್ಯ ದೇವರಮನಿ ಶಿವಕುಮಾರ್, ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಎ.ನಾಗರಾಜ್, ಕೆ.ಜಿ.ಶಿವಕುಮಾರ್, ಉದ್ಯಮಿ ಕೆ.ಎಸ್. ರಮೇಶ್, ಶಿವನಗೌಡ ಪಾಟೀಲ್, ಯುವ ಉದ್ಯಮಿ ಮಂಜುನಾಥ್, ಟಿಂಕರ್ ಮಂಜಣ್ಣ, ಮಾಗಿ ಜಯಪ್ರಕಾಶ್, ಶಿವನಹಳ್ಳಿ ರಮೇಶ್, ಮಂಜುಳಾ ಮಹೇಶ್, ನೀತಾ ನಂದೀಶ್, ಭಾಗ್ಯಾ ಪಿಸಾಳೆ, ಚೇತನಾ ಶಿವಕುಮಾರ್ ಇತರರಿದ್ದರು.
-----