

ದಾವಣಗೆರೆ: ಸರ್ವ ಜನಾಂಗದ ಸಮಗ್ರ ಅಭಿವೃದ್ಧಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ, 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ, ಕಳೆದ ಐದು ದಶಕದಲ್ಲಿ ಆಡಳಿತ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ಜಾನಪದ, ಕೃಷಿ, ಪ್ರವಾಸೋದ್ಯಮ, ತಂತ್ರಜ್ಞಾನ, ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.
ಈ ಸಾಧನೆಯು ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಬೇಕು. ಅವರಿಂದಲೂ ಮುಂದಿನ ದಿನದಲ್ಲಿ ರಚನಾತ್ಮಕ ಬೆಳವಣಿಗೆಗಳು ಆಗಲಿ ಎಂದು ಸಚಿವರು ಆಶಿಸಿದರು.
1956ರಲ್ಲಿ ಏಕೀಕರಣಗೊಂಡ ಮೈಸೂರು ರಾಜ್ಯ, ಕರ್ನಾಟಕ ಎಂಬುದಾಗಿ ಮರು ನಾಮಕರಣಗೊಂಡು 50 ವರ್ಷ ಪೂರೈಸಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಟ್ಟ ಮೊದಲ ಹಲ್ಮಿಡಿ ಶಿಲಾಶಾಸನದ ಪ್ರತಿಕೃತಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಸಮಸ್ತ ಕನ್ನಡಿಗರ ಹಬ್ಬ. ಇದು ನಮ್ಮ ನಾಡು-ನುಡಿ, ಹಿರಿಮೆ-ಗರಿಮೆಗಳನ್ನು ಮೆಲುಕು ಹಾಕುವ ಸಾಂಸ್ಕೃತಿಕ ಉತ್ಸವವಾಗಿದೆ. ಕಾವೇರಿಯಿಂದ ಗೋದಾವರಿವರೆಗೆ ವಿಸ್ತಾರವಾಗಿ ಹರಡಿದ್ದ ಕನ್ನಡನಾಡು ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಎಂದ ಸಚಿವರು, ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದರು.
ಆಕರ್ಷಕ ಪಥ ಸಂಚಲನ:
ವಿವಿಧ ಇಲಾಖೆ, ಶಾಲಾ ಕಾಲೇಜು ವಿಭಾಗ ಒಳಗೊಂಡು 16 ತಂಡಗಳು ಆಕರ್ಷಕ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದವು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎಆರ್‌ಜಿ ಕಾಲೇಜು, ಸೇವಾದಳ, ಸಿದ್ಧಗಂಗಾ ಪ್ರಾಥಮಿಕ ಶಾಲೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ಪೊಲೀಸ್ ವಾದ್ಯವೃಂದ ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವು.
ಪತ್ರಿಕೋದ್ಯಮ, ಶಿಲ್ಪಕಲೆ, ಛಾಯಾಗ್ರಹಣ, ಮುದ್ರಣ, ಜಾನಪದ, ಬಯಲಾಟ, ಸಮಾಜಸೇವೆ ಇತರೆ ಕ್ಷೇತ್ರಗಳ 33 ಮಂದಿ ಸಾಧಕರಿಗೆ ರಾಜ್ಯೋತ್ಸವದ ಗೌರವ ಸನ್ಮಾನ ನೀಡಲಾಯಿತು.
ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಕೆ.ಎಸ್. ಬಸವಂತಪ್ಪ, ಮೇಯರ್ ಕೆ. ಚಮನ್‌ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ತಹಸೀಲ್ದಾರ್ ಡಾ.ಬಿ.ಎನ್. ಅಶ್ವಥ್ ಇತರರಿದ್ದರು.
ಶಾಸನದ ಮಾದರಿ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನದ ಮಾದರಿಯನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪುಷ್ಪಾರ್ಚನೆಯೊಂದಿಗೆ ಉದ್ಘಾಟಿಸಿದರು.