ರೋಗಗಳ ಹೆಚ್ಚಳಕ್ಕೆ ಜೀವನಶೈಲಿಯೇ ಕಾರಣ          ಆರೋಗ್ಯ ಶಿಬಿರದಲ್ಲಿ ಉಮಾಪ್ರಕಾಶ್ ಹೇಳಿಕೆ

1000254973.jpg
Published on

ದಾವಣಗೆರೆ: ದೈನಂದಿನ ಒತ್ತಡದ ಜತೆ ಆಧುನಿಕ ಜೀವನಶೈಲಿಯಿಂದಾಗಿ ಮನುಷ್ಯನಲ್ಲಿ ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಆರೋಗ್ಯದಲ್ಲಿ ಕೊಂಚವೂ ವ್ಯತ್ಯಾಸವಾದಲ್ಲಿ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಪಾಲಿಕೆ ಸದಸ್ಯೆ ಉಮಾ ಪ್ರಕಾಶ್ ಹೇಳಿದರು.
ಎಸ್.ಎಸ್.ನಾರಾಯಣ ಸೂಪರ್ ಸ್ಪ್ಪೆಷಾಲಿಟಿ ಹಾರ್ಟ್ ಸೆಂಟರ್ ಮತ್ತು ಜಯನಗರ ಸಿ ಬ್ಲಾಕ್ ನಾಗರಿಕ ಹಿತರಕ್ಷಣಾ ಸಮಿತಿ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಗರದ ಭೀಷ್ಮ ವೃತ್ತದ ಎಸ್.ಎಂ. ಕಾಂಪ್ಲೆಕ್ಸ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಿತ್ಯ ನಿಯಮಿತ ನಡಿಗೆ, ವ್ಯಾಯಾಮ, ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯವಂತರಾಗಿ ಇರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ಅರೋಗ್ಯವಂತರಾಗುವ ಜತೆ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು.
ದಾವಣಗೆರೆ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್ ವೈದ್ಯ ಡಾ.ರಾಕೇಶ್ ಮಾತನಾಡಿ, ಮಾನವನ ದೇಹದಲ್ಲಿ ಹೃದಯ ಪ್ರಮುಖ ಅಂಗ. ಎದೆ ನೋವು ಕಾಣಿಸಿಕೊಂಡಾಗ ಭಯಕ್ಕೆ ಒಳಗಾಗದೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಎಂದರು.
ಹೃದಯಾಘಾತಕ್ಕೆ ಭಯವೇ ಮೂಲ ಕಾರಣ. ಆದ್ದರಿಂದ ನಾವು ಹೃದಯವಂತರಾಗುವ ಮೂಲಕ ಉತ್ತಮ ಸಮಾಜ ನಿರ್ಮಿಸಬಹುದು ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲೂ ಕರೆ ಮಾಡಿದರೂ ಸ್ಪಂದನೆ ಮಾಡುವುದಾಗಿ ಹೇಳಿದರು.
ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ್, ಜಯನಗರ ಸಿ ಬ್ಲಾಕ್ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎನ್.ಬಿಕ್ಕೋಜಪ್ಪ,  ನಾಗರಾಜ್, ಪಿ.ಅಂಜಿನಪ್ಪ, ಟಿ.ಇ.ರುದ್ರಪ್ಪ, ವೈ.ತಿಪ್ಪೇಸ್ವಾಮಿ ಶೆಟ್ಟಿ,  ಡಿ.ರವಿಕುಮಾರ್, ಪಿ.ಎಸ್.ನಾಗರಾಜ್, ಮೈಲಾರಪ್ಪ, ಪತ್ರಕರ್ತ ಎಂ.ವೈ.ಸತೀಶ್, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎಸ್.ಜಿ.ಉಳವಯ್ಯ, ಕಾರ್ಯದರ್ಶಿ ಸಿ.ಅಜಯ್ ನಾರಾಯಣ್, ಎಚ್.ಎನ್.ಶಿವಕುಮಾರ್ ಇತರರಿದ್ದರು. ಇದೇ ವೇಳೆ ಸಾರ್ವಜನಿಕರಿಗೆ ರಕ್ತದೊತ್ತಡ, ಇಸಿಜಿ ಪರೀಕ್ಷೆ ಜತೆಗೆ ವೈದ್ಯರ ಜತೆ ಸಮಾಲೋಚನೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net