

ದಾವಣಗೆರೆ: ಮುಜರಾಯಿ ಇಲಾಖೆಗೆ ಸೇರಿದ, ಹೊನ್ನಾಳಿ ತಾಲೂಕಿನ ಅತ್ಯಂತ ದೊಡ್ಡ, ಸುಪ್ರಸಿದ್ದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಂಬು ಹೊಡೆಯುವ ಮೂಲಕ ವಿಜೃಂಭಣೆಯಿಂದ ನೆರವೇರಿತು.
ದಸರಾ ಹಬ್ಬದ ನಂತರದ ಶುಕ್ರವಾರ ಬನ್ನಿ ಮಹೋತ್ಸವ ಆಚರಿಸುವುದು ಈ ಕ್ಷೇತ್ರದ ವೈಶಿಷ್ಟ್ಯ. ಹೊನ್ನಾಳಿ ಪಟ್ಟಣ, ಮಾರಿಕೊಪ್ಪ, ಮಾದೇನಹಳ್ಳಿ, ಕತ್ತಿಗೆ, ಹತ್ತೂರು, ಎಚ್. ಕಡದಕಟ್ಟೆ, ಚಿಕ್ಕೇರಹಳ್ಳಿ ಹಾಗೂ ದೊಡ್ಡೇರಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಂದ ಹಳದಮ್ಮ ದೇವಿ ಭಕ್ತರು ಶುಕ್ರವಾರ ಮಧ್ಯಾಹ್ನದಿಂದಲೇ ಉಪವಾಸ ವ್ರತ ಇದ್ದು, ಬನ್ನಿ ಮುಡಿಯುವವರೆಗೂ ದೀಪ ಬೆಳಗಿಸಿದರು.
ಮಹಾನವಮಿ ಬನ್ನಿ ಮಹೋತ್ಸವ ನಡೆಯುವ ಸ್ಥಳಕ್ಕೆ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಂಡರು. ಜತೆಗೆ ಅರ್ಚಕ ಮಲ್ಲಿಕಾರ್ಜುನಪ್ಪ, ಉಪವಾಸ ವ್ರತದೊಂದಿಗೆ ಶಮೀ ವೃಕ್ಷದ ಮುಂಭಾಗದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೂರು ಬಾಣ(ಅಂಬು) ಹೊಡೆದರು.
ಬಾಣಗಳು ಯಾವ ದಿಕ್ಕಿಗೆ ಹೋಗುತ್ತವೆ ಎಂಬುದರ ಆಧಾರದ ಮೇಲೆ ಭಕ್ತರು ಮಳೆ-ಬೆಳೆ ಹಾಗೂ ರೈತರು-ನಾಡಿನ ಭವಿಷ್ಯ ಲೆಕ್ಕ ಹಾಕುವ ಪದ್ಧತಿ ಇದೆ. ನಂತರ ಭಕ್ತರು ಪರಸ್ಪರ ಬನ್ನಿಪತ್ರೆ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಸುನೀಲ್‌ಕುಮಾರ್, ಗ್ರಾಮದ ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಮಾಜಿ ಸದಸ್ಯ ಚಿನ್ನಪ್ಪ, ಹಳದಪ್ಪ, ಅರ್ಚಕ ಮಲ್ಲಿಕಾರ್ಜುನಪ್ಪ, ರಾಜಸ್ವ ನಿರೀಕ್ಷಕ ರಮೇಶ್, ಮೌನೇಶ್ ಉಪಸ್ಥಿತರಿದ್ದರು. ವಿವಿಧೆಡೆಯಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
---