ಕಣ್ಣನ್ನು ರಾಷ್ಟ್ರಿಯ ಆಸ್ತಿಯಾಗಿ ಘೋಷಿಸಿ

1000963803.jpg
Published on

ದಾವಣಗೆರೆ: ಶ್ರೀಲಂಕಾ ದೇಶದ ಮಾದರಿಯಲ್ಲಿ ಭಾರತದಲ್ಲಿ ಕಣ್ಣುಗಳನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸಬೇಕು ಎಂದು ಸಕ್ಷಮ- ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಕೇಶವ್‌ಕುಮಾರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ನಗರದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಸಕ್ಷಮ- ಅಂಗವಿಕಲರ ಸಬಲೀಕರಣದ ರಾಷ್ಟ್ರೀಯ ಸಂಘಟನೆಯ ಸಂಸ್ಥಾಪನೆ ಹಾಗೂ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಲಂಕಾದಲ್ಲಿ ಕಾನೀನಿರುವ ಕಾರಣಕ್ಕೆ ನೇತ್ರದಾನಿಗಳು ಹೆಚ್ಚಿದ್ದಾರೆ. ಒಂದು ಕಣ್ಣನ್ನು ಅಂಧರು ಹಾಗೂ ಕಾರ್ನಿಯಾ ಸಮಸ್ಯೆ ಇದ್ದವರಿಗೆ ಸೇರಿ ಇಬ್ಬರಿಗೆ ದೃಷ್ಟಿ ನೀಡಬಹುದು. ಆದರೆ ಭಾರತದಲ್ಲಿ 20 ದಾನಿಗಳಿದ್ದರೆ ಬೇಡಿಕೆ 100 ಜನರಷ್ಟಿದೆ. ರಾಷ್ಟ್ರೀಯ ಆಸ್ತಿಯಾಗಿ ಘೋಷಿಸಿದಲ್ಲಿ ಕಾನೂನಿನ್ವಯ ಎಲ್ಲರೂ ನೇತ್ರಗಳನ್ನು ದಾನವಾಗಿ ನೀಡಬಹುದು ಎಂದರು.

ಅಂಗವಿಕಲರಿಗೂ ಶಾಸಕ, ಎಂಪಿ ಸ್ಥಾನ ಮೀಸಲಿಡಬೇಕು. ಅಂಗವಿಕಲರಿಗೆ ಹುದ್ದೆಗಳ ಪ್ರಮಾಣ ಹೆಚ್ಚಿಸಬೇಕು. ಅವರ ವೃತ್ತಿಪರತೆಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕೆಂದು ಸಕ್ಷಮ ಸಂಘಟನೆಯಿಂದ ರಾಜ್ಯ-ಕೇಂದ್ರಸರ್ಕಾರಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಕ್ಷಮದಲ್ಲಿ ಸ್ವಯಂಸೇವಕರು ಗೌರವಧನರಹಿತ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ಸಂಘಟನೆಗೆ ಬರುವ ಅನುದಾನ ಸಂಪೂರ್ಣ ವಿಕಲಾಂಗರಿಗೇ ಬಳಕೆಯಾಗುತ್ತಿದೆ. ಆಸಕ್ತರು ಸಂಘಟನೆಯ ಸಕ್ರಿಯ ಸದಸ್ಯರು, ಸಕ್ಷಮ ಮಿತ್ರರು ಆಗಬಹುದು ಎಂದು ಹೇಳಿದರು.

ಸದ್ಯಕ್ಕೆ ಮೂರು ಜಿಲ್ಲೆಗಳಲ್ಲಿ ಸಂಘಟನೆಯಿಂದ ವಿಕಲಾಂಗರ ಸೇವಾ ಕೇಂದ್ರಗಳಿವೆ. ಇದನ್ನು ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸುವ ಆಲೋಚನೆ ಇದೆ. ಇದರಡಿ ಯುಡಿಐಡಿ ಕಾರ್ಡ್, ವೈದ್ಯರೊಂದಿಗೆ ಸಂಪರ್ಕ, ಫಿಸಿಯೋಥೆರಪಿ ಮೊದಲಾದ ನೆರವು ಕಲ್ಪಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಕೌಶಲ ತರಬೇತಿ ಕೇಂದ್ರವಿದೆ. ಇದು ದಾವಣಗೆರೆಯಲ್ಲೂ ಆಗಬೇಕು ಎಂದು ತಿಳಿಸಿದರು.

ವಿಕಲಾಂಗರಿಗೇ ಪ್ರತ್ಯೇಕ ವಿದ್ಯಾರ್ಥಿ ನಿಲಯ ತೆರೆಯುವ ಆಲೋಚನೆ ಇದೆ. ಸಕ್ಷಮ ಸಂಘಟನೆಯಲ್ಲಿ ವಿವಿಧ ಪ್ರಕೋಷ್ಠಗಳಿದ್ದು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿವೆ. ವಿಕಲಾಂಗರಿಗೆ ಉದ್ಯೋಗ ತರಬೇತಿ, ಪೂರಕವಾದ ಕ್ರೀಡೆಗಳು, ಸಾಮಾಜಿಕ ಉತ್ಸವ ನಡೆಸಲಾಗುತ್ತಿದೆ. ವಿಕಲಾಂಗರು ದೇಶಕ್ಕೆ ಹೊರೆಯಾಗದೆ ಸಮರ್ಥ ಭಾರತ ಕಟ್ಟಲು ಸಜ್ಜಾಗಬೇಕು ಎಂದು ಹೇಳಿದರು.

ಕಿವಿಮೂಗು ಗಂಟಲು ತಜ್ಞ ವೈದ್ಯ ಡಾ.ಎ.ಎಂ. ಶಿವಕುಮಾರ್ ಮಾತನಾಡಿ, ವಿಕಲಾಂಗರೂ ಕೂಡ ಇಂದು ವೈದ್ಯರು, ಆಡಳಿತ ಸೇವೆ ಹಾಗೂ ಕ್ರೀಡಾಪಟುಗಳೂ ಆಗುತ್ತಿದ್ದಾರೆ. ಅಂಗವಿಕಲರಲ್ಲಿ ಒಂದು ಅಂಗ ಊನವಾಗಿದ್ದರೆ ಮತ್ತೊಂದು ಅಂಗ ಜಾಗೃತವಾಗಿರುತ್ತದೆ. ಶಿಕ್ಷಣ, ಕ್ರೀಡೆ, ಸಂಗೀತ ಮೊದಲಾದ ಕ್ಷೇತ್ರದಲ್ಲಿ ಅವರಿಗಿರುವ ವಿಶೇಷ ಶಕ್ತಿಯನ್ನು ಪಾಲಕರು ಗುರುತಿಸಿ ಬೆಳೆಸಬೇಕು ಎಂದರು.

ಪಾಲಕರು ಸಮಾನ್ಯ ಮಕ್ಕಳಂತೆಯೇ ವಿಕಲಾಂಗ ಮಕ್ಕಳನ್ನೂ ಪಾಲನೆ ಮಾಡಬೇಕು. ನಿರ್ಲಕ್ಷಿಸಬಾರದು. ಸಕ್ಷಮ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಮಾಜಸೇವಾ ಕಾರ್ಯಕರ್ತ ಜಯಚಂದ್ ಪಿ. ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನಾಡಿದ ಸಕ್ಷಮ ದಾವಣಗೆರೆ ಶಾಖೆ ಅಧ್ಯಕ್ಷ ಬಿ.ಜಿ. ಮನೋಹರ್ ಸಂಘದ ಚಟುವಟಿಕೆಗಳನ್ನು ವಿವರಿಸಿದರು. ನಿವೃತ್ತ ಎಸ್ಪಿ ರವಿನಾರಾಯಣ್ ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net