ಕೋರ್ಟ್‌ಗಳಿಗೆ ವಕೀಲರ ಸಹಕಾರ ಅಗತ್ಯ  ಜಿಲ್ಲಾ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿಕೆ

1000299012.jpg
Published on

ದಾವಣಗೆರೆ: ನ್ಯಾಯಾಲಯಗಳು ಜನರ ನಂಬಿಕೆ ಉಳಿಸಿಕೊಂಡು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ವಕೀಲರ ಸಹಕಾರ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಜುಲೈನಲ್ಲಿ ಆಯೋಜಿತ ಲೋಕ ಅದಾಲತ್‌ನಲ್ಲಿ ಅತಿ ಹೆಚ್ಚು ಪ್ರಕರಣ ಇತ್ಯರ್ಥಪಡಿಸಿದ್ದರ ಹಿನ್ನೆಲೆಯಲ್ಲಿ ಮಂಗಳವಾರ ವಕೀಲರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ, ಕರ್ನಾಟಕ ಹೈಕೋರ್ಟ್ ಜಿಲ್ಲಾ ವಕೀಲರ ಸಂಘಕ್ಕೆ ನೀಡಿದ ಪ್ರಶಂಸಾ ಪತ್ರ ವಿತರಿಸಿ ಮಾತನಾಡಿದರು.
ಭಾರತೀಯು ಧರ್ಮ, ವರ್ಗ, ಜಾತಿ, ಲಿಂಗ ಭೇದ ಮೀರಿ ನ್ಯಾಯಾಲಯಗಳನ್ನೇ ದೇಗುಲಗಳೆಂದು ಭಾವಿಸಿದ್ದಾರೆ. ಈ ನಂಬಿಕೆಗೆ  ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಶೋಷಿತರು, ಸಮಾಜದ ಕೆಳಸ್ತರದ ಜನರಿಗೆ ಸಕಾಲಕ್ಕೆ ನ್ಯಾಯ ವಿತರಣೆ ವಿತರಿಸುವಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಮಾತನಾಡಿ ವಕೀಲರು ಹಸಿದವರಿಗೆ ಅನ್ನ, ಕಷ್ಟದಲ್ಲಿರುವವರಿಗೆ ಸಹಾಯ, ತಪ್ಪು ಮಾಡಿದವರನ್ನು ಸರಿದಾರಿಗೆ ತರುತ್ತಿದ್ದಾರೆ. ಸೋಲಿನಲ್ಲೂ ಧೈರ್ಯ, ಉತ್ಸಾಹ ತುಂಬುವ ಮೂಲಕ, ಕಕ್ಷಿದಾರರಿಗೆ ತಾಯಿಬೇರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಲೋಕ ಅದಾಲತ್‌ನಲ್ಲಿ 25 ಕುಟುಂಬಗಳನ್ನು ಒಗ್ಗೂಡಿಸುವ ಮೂಲಕ ಕೌಟುಂಬಿಕ ನ್ಯಾಯಾಲಯ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ ಮಾತನಾಡಿ ದಾವಣಗೆರೆ ಜಿಲ್ಲಾ ವಕೀಲರ ಸಂಘವು ಹೈಕೋರ್ಟ್‌ನಿಂದ ಪ್ರಶಂಸಾ ಪತ್ರ ಪಡೆಯುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಇಂದಿಗೂ ಜನವಿಶ್ವಾಸ ಉಳಿಸಿಕೊಂಡು ಬಂದಿದೆ. ನ್ಯಾಯಾಂಗದ ಭಾಗವಾಗಿರುವ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿ ಹೆಚ್ಚು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣ್‌ಕುಮಾರ್, ಮಕ್ಕಳ ಸ್ನೇಹಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗರೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ, ನ್ಯಾಯಾಧೀಶರಾದ ರೇಷ್ಮಾ, ವಿ.ಎಲ್. ಅಮರ್, ಸಿ. ನಾಗೇಶ್, ಎಚ್.ಡಿ. ಗಾಯತ್ರಿ, ಮಲ್ಲಿಕಾರ್ಜುನ್, ಸಿದ್ಧರಾಜು, ನಾಜಿಯಾ ಕೌಸರ್ ಇದ್ದರು. ಜಿ.ಕೆ.ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಎಸ್. ಬಸವರಾಜ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net