

ದಾವಣಗೆರೆ: ನಗರಪಾಲಿಕೆ ಪೌರಕಾರ್ಮಿಕರು, ಕಸ ವಿಲೇವಾರಿ ವಾಹನ ಚಾಲಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಹೊರವಲಯದ ಆವರಗೊಳ್ಳದ ತ್ಯಾಜ್ಯ ವಿಲೇವಾರಿ ಘಟಕ ಸಮೀಪ, ಸ್ವಚ್ಛಭಾರತ್ ಮಿಷನ್ ಯೋಜನೆಯಡಿ 21.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಂಡ್ರೋ ಕಾಂಪೋಸ್ಟಿಂಗ್ ಘಟಕ ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಗಾಗಿ ಪಾಲಿಕೆಯ ತ್ಯಾಜ್ಯ ಸಂಗ್ರಹಣಾ ವಾಹನಗಳು ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿದ್ದು, ಸಾರ್ವಜನಿಕರು ಕಸವನ್ನು ರಸ್ತೆ, ಚರಂಡಿ, ಖಾಲಿ ನಿವೇಶನಗಳಲ್ಲಿ ಎಸೆಯದೇ ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ತ್ಯಾಜ್ಯಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ನೀಡಬೇಕೆಂದರು.
ಆವರಗೊಳ್ಳದ ತ್ಯಾಜ್ಯ ವಿಲೇವಾರಿ ಜಮೀನಿನಲ್ಲಿ ಕಳೆದ ಮೇ ತಿಂಗಳಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಹಾನಿಗೀಡಾದ ಬೆಳೆ ನಷ್ಟ ಪರಿಹಾರವನ್ನು ಸಂತ್ರಸ್ತ ರೈತರಿಗೆ ವಿತರಿಸಲಾಯಿತು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ ನಗರದ ತ್ಯಾಜ್ಯ ಸಂಸ್ಕರಣೆಗಾಗಿ ಉತ್ತಮ ಸಂಸ್ಕರಣಾ ಘಟಕ ನಿರ್ಮಿಸಿದ್ದು, ಎನ್‌ಜಿಟಿ ಆದೇಶದಂತೆ ನಗರದಲ್ಲಿ ಉತ್ಪತ್ತಿಯಾಗುವ ಪೂರ್ಣ ಪ್ರಮಾಣದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸುವುದರಿಂದ ಜನರಿಗೆ ಉತ್ತಮ ಗೊಬ್ಬರ ದೊರೆಯಲಿದೆ ಎಂದರು.
ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಉತ್ತಮ ಸಹಕಾರ ನೀಡಿರುವ ಅವರಗೊಳ್ಳ ಹಾಗೂ ಸ್ಥಳೀಯ ರೈತರಿಗೆ ಉತ್ಪಾದಿತ ಗೊಬ್ಬರ ಒದಗಿಸಲಾಗುವುದು. ತ್ಯಾಜ್ಯ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ನಗರದ ಸ್ವಚ್ಛತೆಗಾಗಿ ಎಲ್ಲ ಸಾರ್ವಜನಿಕರು ಸಹಕಾರ ನೀಡುವಂತೆ ತಿಳಿಸಿದರು.
15 ನೇ ಹಣಕಾಸು ಆಯೋಗದ ಅನುದಾನದಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗಾಗಿ ಖರೀದಿಸಲಾದ ಆಟೋ ಟಿಪ್ಪರ್, ಟ್ರ್ಯಾಕ್ಟರ್, ಸಕ್ಕಿಂಗ್ ಯಂತ್ರಗಳನ್ನು ಸಂಸದೆ ಇದೇ ವೇಳೆ ಉದ್ಘಾಟಿಸಿದರು.
ಮೇಯರ್ ವಿನಾಯಕ ಪೈಲ್ವಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್. ಉದಯಕುಮಾರ್, ಮೀನಾಕ್ಷಿ ಜಗದೀಶ, ಅಬ್ದುಲ್ ಲತೀಫ್, ಪಾಲಿಕೆಯ ಸದಸ್ಯರಾದ ಎ.ನಾಗರಾಜ್, ಚಮನ್‌ಸಾಬ್, ಸುಧಾ ಮಂಜುನಾಥ ಇಟ್ಟಿಗುಡಿ, ಆಯುಕ್ತೆ ರೇಣುಕಾ, ಪಾಲಿಕೆಯ ಅಧಿಕಾರಿಗಳು, ಆವರಗೊಳ್ಳ ಗ್ರಾಮಸ್ಥರು ಭಾಗವಹಿಸಿದ್ದರು.