ಮಕ್ಕಳಿಗೆ ನೀಡಿ ಮೌಲ್ಯ ಶಿಕ್ಷಣ  ಪ್ರಾಧ್ಯಾಪಕಿ ಡಾ.ಅನುರಾಧ ಹೇಳಿಕೆ

1000367234.jpg
Published on

ದಾವಣಗೆರೆ: ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಜತೆ ಭಾರತೀಯ ಸಂಸ್ಕೃತಿ ಪರಿಚಯಿಸಬೇಕಿದೆ ಎಂದು ಎವಿಕೆ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ಪಿ.ಎಂ. ಅನುರಾಧ ಹೇಳಿದರು.
ನಗರದ ಈಶ್ವರಮ್ಮ  ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಸತ್ಯಸಾಯಿ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಗತೀಕರಣ ಪ್ರವೇಶದಿಂದ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದ ಅವರು, ದೇಶದ ಶಿಕ್ಷಣ ವ್ಯವಸ್ಥೆ ಪಾಶ್ಚಿಮಾತ್ಯರನ್ನು ಅನುಕರಿಸುವಂತದ್ದು, ನಾಲ್ಕು ಗೋಡೆಗಳ ಮಧ್ಯೆ ನೀಡುವ ಶಿಕ್ಷಣ ಜೀವನ್ಮುಖಿ ಆಗಿರುವುದಿಲ್ಲ ಎಂದು ಮಹಾತ್ಮ ಗಾಂಧೀಜಿ ಹೇಳಿರದ್ದಾರೆ ಎಂದು ಉಲ್ಲೇಖಿಸಿದರು.
ವಿದ್ಯಾರ್ಥಿಗಳು ಕೇವಲ ವೈದ್ಯರು ಹಾಗೂ ಇಂಜಿನಿಯರ್ ಆಗಬೇಕು ಎಂದುಕೊಳ್ಳುತ್ತಾರೆ. ಆದರೆ, ಒಳ್ಳೆಯ ಶಿಕ್ಷಕರು, ವಕೀಲರು, ಆರಕ್ಷಕರು, ರೈತರು, ಸೈನಿಕರು, ರಾಜಕಾರಣಿಗಳು ದೇಶಕ್ಕೆ ಬೇಕಾಗಿದೆ. ನಮ್ಮ ಸಂಸ್ಕೃತಿ ಮತ್ತು ದೇಶಭಕ್ತಿ ಮೈಗೂಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಖಡ್ಗಕ್ಕಿಂತ ಲೇಖನಿ ಹರಿತವಾದದ್ದು, ಶಿಕ್ಷಕರ ವೃತ್ತಿ ಬಹಳ ಶ್ರೇಷ್ಠವಾದ ವೃತ್ತಿ. ಜಗತ್ತಿನಲ್ಲಿ ಕೆಟ್ಟದ್ದು ಇದ್ದರೂ, ಅಂಧಕಾರವಿದ್ದರೂ ಅಲ್ಲಲ್ಲಿ ಬೆಳಕನ್ನು ಬೀರುವ ಜ್ಯೋತಿಗಳು ಶಿಕ್ಷಕರಾಗಿದ್ದಾರೆ ಎಂದು ಹೇಳಿದರು.
ಶಾಲಾಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್. ಸುಜಾತಾ ಕೃಷ್ಣ ಮಾತನಾಡಿ, ಶಿಕ್ಷಕರ ದಿನಾಚರಣೆ ಬಹಳಷ್ಟು ಅರ್ಥಪೂರ್ಣವಾಗಿದೆ. ಮೌಲ್ಯಾಧಾರಿತ ಶಿಕ್ಷಣ ಕೊಡುವುದೇ ಶಾಲೆಯ ವೈಶಿಷ್ಟೃವಾಗಿದೆ. ಇಲ್ಲಿ ಕಲಿತ ಮಕ್ಕಳು ಉತ್ತಮ ನಾಗರಿಕರಾಗಿ ಹೊರಹೊಮ್ಮಿದ್ದಾರೆ ಎಂದರು.
ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್, ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ್, ಉಪ ಪ್ರಾಚಾರ್ಯೆ ಜಿ.ಎಸ್. ಶಶಿರೇಖಾ ಇದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರಿಗೆ ಗುರುಕಾಣಿಕೆ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರಾದ ಬಿ.ಎನ್. ಭಾವನಾ ಮತ್ತು ಎ.ಪಿ. ಭೂಮಿಕಾ ನಿರೂಪಿಸಿದರು. ಎಂ.ಯು. ರೋಹಿಣಿ ಸ್ವಾಗತಿಸಿದರು. ಜಿ.ಎಸ್. ಮೇಘನಾ ವಂದಿಸಿದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net