ಈ ಮಣ್ಣಿನ ಹೆಣ್ಣನು ಜರಿಬೇಡ.. ಗಮನ ಸೆಳೆದ ಮಕ್ಕಳ ನೃತ್ಯರೂಪಕ

1000475053.jpg
Published on

ದಾವಣಗೆರೆ: ಜಿಲ್ಲಾಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ ಕನ್ನಡದ ಮನಸ್ಸುಗಳ ಗಮನ ಸೆಳೆಯಿತು. ಗುರುಕುಲ ಪಬ್ಲಿಕ್ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ನೃತ್ಯರೂಪಕ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣದ ವ್ಯಾಕುಲತೆಯನ್ನು ತೆರೆದಿಟ್ಟಿತು. ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ದುರ್ಗಿಯು ಅವತಾರ ತಾಳಿ ಸಂಹರಿಸುವ ಚಿತ್ರಣ ಗಮನ ಸೆಳೆಯಿತು.  ‘ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಈ ಮಣ್ಣಿನ ಹೆಣ್ಣನು ಜರಿಬೇಡ ಅಭಿಮಾನಿ..’ ಹಾಡಿನ ಮೂಲಕ ಹೆಣ್ಣಿನ ಕುಲದ ರಕ್ಷಣೆ ಬಗ್ಗೆ ರೂಪಕ ಸಾರಿತು. ಹುಲಿ ಕುಣಿತ ನೋಡುಗರನ್ನು ರಂಜಿಸಿತು.
ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ ಮಕ್ಕಳು ‘ಕೇಳಿಸದೆ ಕಲ್ಲು ಕಲ್ಲಿನಲಿ’ ಹಾಡಿಗೆ ಹೆಜ್ಜೆ ಹಾಕಿದರು.  ಶಾಮನೂರು ಜೈನ್ ವಿದ್ಯಾಲಯ ಶಾಲಾ ಮಕ್ಕಳು ‘ಜೀವ ಕನ್ನಡ..ದೇಹ ಕನ್ನಡ..’ ಚಿತ್ರ ಗೀತೆಗೆ ನೃತ್ಯರಂಜನೆ ನೀಡಿದರು.

ಮೆರವಣಿಗೆಯಲ್ಲಿ ಕಲಾ ತಂಡಗಳ ಸದ್ದು
ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದ ಆವರಣದಲ್ಲಿ ಕನ್ನಡ ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಪ್ರಮುಖ ಬೀದಿಗಳ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ತಲುಪಿತು.
ಹರಿಹರದ ಮಹಿಳಾ ಡೊಳ್ಳಿನ ತಂಡ, ಹೊನ್ನಾಳಿಯ ಕೀಲುಕುದುರೆ, ಗಾರುಡಿ ಗೊಂಬೆಗಳು, ಜಗಳೂರಿನ ಕಹಳೆ, ಉರುಮೆ ತಂಡಗಳು ಸದ್ದು ಮಾಡಿದವು. ಕೆಎಸ್‌ಆರ್‌ಟಿಸಿ ತಂಡದ ಸ್ತಬ್ಧಚಿತ್ರದಲ್ಲಿ ಹಿರಿಯ ಸಾಹಿತಿಗಳು, ಜಿಲ್ಲೆಯ ಪ್ರವಾಸಿ ತಾಣಗಳು ಮೇಳೈಸಿದವು. ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಮಕ್ಕಳು ಮೆರವಣಿಗೆಗೆ ಸಾಕ್ಷಿಯಾದರು.

.

 
.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net