

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆಪಾದನೆ ಮಾಡುತ್ತಿರುವ ಬಿಜೆಪಿ, ಅಪಪ್ರಚಾರಕ್ಕಾಗಿ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಬಿಜೆಪಿಯವರು ಕಾನೂನುಬಾಹಿರ ಗಣಿಗಾರಿಕೆ ನಡೆಸಿ, ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ಈಗ ರಾಜ್ಯದಲ್ಲಿ ಯಾವುದೇ ಅಕ್ರಮ ನಡೆಯದಿದ್ದರೂ ಬಿಜೆಪಿ, ಜನಸಮುದಾಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಮುಖ್ಯಮಂತ್ರಿ ಯಾವುದೇ ತಪ್ಪು ಮಾಡಿಲ್ಲ. ಕಾನೂನುಬಾಹಿರ ಕೆಲಸ ಆಗಿಲ್ಲ ಎಂಬುದನ್ನು ಇಡೀ ರಾಜ್ಯಕ್ಕೆ ತಿಳಿಸಲಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣ ಕುರಿತಂತೆ ಸತ್ಯ ತಿಳಿಸಲು ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿದ್ದಾರೆ. ಅಧಿಕಾರಿಗಳು ಅಥವಾ ಬೇರೆ ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆ ವಿಧಿಸಬೇಕು ಎಂದೇ ಸಿಐಡಿ ತನಿಖೆಗೆ ವಹಿಸಲಾಗಿದೆ. ಇದರ ಜತೆಗೆ ಸಿಬಿಐ, ಇಡಿಯವರೂ ತನಿಖೆ ನಡೆಸುತ್ತಿದ್ದಾರೆ. ಅಂತಿಮವಾಗಿ ಏನು ವರದಿ ಬರುತ್ತದೋ ನೋಡೋಣ. ವರದಿ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಸಚಿವರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಾಯಿ ಮಾಂಸ ಮಾರಾಟ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಸ್ಥಾನದಿಂದ ವಾರಕ್ಕೆ, ಹದಿನೈದು ದಿನಕ್ಕೊಮ್ಮೆ ಮಾಂಸ ತಂದು ಮಾರಾಟ ಮಾಡುವುದು ಕೆಲವರ ವೃತ್ತಿ. ಕೆಲವರು ನಾಯಿ ಮಾಂಸ ಎಂದು ಆಪಾದನೆ ಮಾಡಿದ್ದರು. ಪ್ರಯೋಗಾಲಯದ ವರದಿ ಅನ್ವಯ ಅದು ಮೇಕೆ ಮಾಂಸ ಎಂಬುದು ತಿಳಿದುಬಂದಿದೆ. ದುರುದ್ದೇಶದಿಂದ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಅಂಥವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಯಾವುದೇ ಇಲಾಖೆಗೆ ಬಜೆಟ್‌ನಲ್ಲಿ ನೀಡಿದ ಅನುದಾನ ಸ್ಥಗಿತಗೊಳಿಸಲಾಗದು. ಸ್ವಲ್ಪ ತಡವಾದರೂ ಸಹ ಸರ್ಕಾರ ಅದನ್ನು ಇಲಾಖೆಗೆ ಮಂಜೂರು ಮಾಡುತ್ತದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಅನುದಾನ ವಾಪಸಾತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
----