ಬಾಣಂತಿಯರ ಸಾವಿಗೆ ಆರೋಗ್ಯ ಸಚಿವರೇ ಹೊಣೆ

1000611280.jpg
Published on

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಇದುವರೆಗೆ 33 ಬಾಣಂತಿಯರು ಮೃತಪಟ್ಟಿದ್ದು, ಇದಕ್ಕೆ ಆರೋಗ್ಯ ಸಚಿವರೇ ಹೊಣೆ ಎಂದು ಬಿಜೆಪಿಯ ಸತ್ಯಶೋಧನಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ದಾವಣಗೆರೆಯಲ್ಲಿ ಮಂಗಳವಾರ, ಸತ್ಯಶೋಧನಾ ಸಮಿತಿ ಮುಖಂಡರು ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿತರಣೆಯಾಗುವ ಔಷಧಗಳ ಮಾಹಿತಿ ಸಂಗ್ರಹಿಸಿತು.
ನಂತರ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ನೇತೃತ್ವ ವಹಿಸಿದ್ದ ಶಾಸಕ ಚಂದ್ರು ಲಮಾಣಿ, ಬಾಣಂತಿಯರ ಸಾವಿಗೆ ಕಾರಣರಾದ ಆರೋಗ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಹೇಳಿದರು. ಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಬಂಗಾಳದಿಂದ ತರಿಸಿಕೊಂಡ ಆರ್.ಎಲ್.ಸಲೈನ್ ಗುಣಮಟ್ಟದಲ್ಲ ಎಂದು ಚಿಗಟೇರಿ ಆಸ್ಪತ್ರೆ ಅಧೀಕ್ಷಕರು ಫೆ.21ರಂದು ಸರ್ಕಾರಕ್ಕೆ ಪತ್ರ ಬರೆದರೂ ಅದನ್ನೇ ಬಳಸುವಂತೆ ಸರ್ಕಾರ ವಹಿಸಿದ ನಿರ್ಲಕ್ಷೃವೇ ಸಾವಿಗೆ ಕಾರಣ ಎಂದು ಹೇಳಿದರು.
ಔಷಧದ ಬಾಟಲಿಯಲ್ಲಿ ಫಂಗಸ್ ಬೆಳವಣಿಗೆ ಕುರಿತು ವೈದ್ಯರು ಶಂಕಿಸಿದ್ದರು. ಹೆಚ್ಚಿನ ಸಾವಿನ ಪ್ರಕರಣಗಳಲ್ಲಿ ಸೆಪ್ಟಿಕ್ ಶಾಕ್ ಎಂದೇ ವರದಿಯಾಗಿದೆ. ಸಲೈನ್ ವಿಷಯುಕ್ತವಾಗಿದ್ದರೆ, ರಕ್ತನಾಳಗಳು ಗಟ್ಟಿಯಾಗುತ್ತವೆ ಎಂದು ತಿಳಿಸಿದರು.
ನ. 16ರಂದು ನಿಗದಿತ ಬ್ಯಾಚಿನ ಔಷಧ ಖಾಲಿ ಮಾಡಿ, ಉಳಿದ ಶೇ 5 ರಷ್ಟನ್ನು ವಾಪಸ್ ಕಳಿಸುವಂತೆ ಸರ್ಕಾರ ನೋಡಿಕೊಂಡಿತು.  ಸಚಿವರ ಕೈವಾಡದಿಂದ ಆ ಕಂಪೆನಿಗೆ ಔಷಧ ಪೂರೈಕೆಗೆ ಅನುಮತಿ ಲಭಿಸಿತ್ತು ಎಂದು ಟೀಕಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಸಚಿವರು ಉತ್ತರಿಸಿದಂತೆ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಮಕ್ಕಳನ್ನು ನೋಡಿಕೊಳ್ಳಲು 2 ಸಾವಿರ ರೂ. ಕೂಡ ತಲುಪಿಲ್ಲ. ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಸಚಿವರು ಮೃತ ತಾಯಂದಿರ ಮನೆಗೆ ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತರ ಕುಟುಂಬಕ್ಕೆ 25 ಲಕ್ಷ ರೂ. ನೀಡಬೇಕು. ಮೃತ ಬಾಣಂತಿಯರ ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣ ಸೇರಿ ಎಲ್ಲ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು. ಔಷಧ ಕಂಪನಿಗೆ ದಂಡ ವಿಧಿಸುವ ಜತೆಗೆ ಕಪ್ಪುಪಟ್ಟಿಗೆ ಸೇರಿಸಬೇಕು. ಸಾವಿನ ಸಂಖ್ಯೆ ಇಳಿಸಲು ಸರ್ಕಾರ, ಆಸ್ಪತ್ರೆಗಳಲ್ಲಿ ಕೊರತೆ ಇರುವ ಐಸಿಯು ಬೆಡ್ ವ್ಯವಸ್ಥೆ, ಸಿಬ್ಬಂದಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ತಂಡದ ಪ್ರಮುಖರಾದ ಡಾ. ಪದ್ಮಾ ಪ್ರಕಾಶ್, ಡಾ. ವಿಜಯಲಕ್ಷ್ಮಿ ತುಂಗಳ, ಪ್ರದೀಪ್ ಕಡಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮುಖಂಡರಾದ ಲೋಕಿಕೆರೆ ನಾಗರಾಜ್, ಕೊಳೇನಹಳ್ಳಿ ಸತೀಶ್, ಅನಿಲ್‌ಕುಮಾರ್ ನಾಯ್ಕ, ಐರಣಿ ಅಣ್ಣೇಶ್, ಕೊಟ್ರೇಶ್‌ಗೌಡ, ಎಚ್.ಸಿ. ಜಯಮ್ಮ, ಡಾ. ಶೋಭಾ ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net