ಬಸವ ವಚನಗಳು ದಾರಿದೀಪ ಆವರಗೆರೆಯಲ್ಲಿ ವಿಶ್ವಗುರು ಜಯಂತಿ

1000127509.jpg
Published on

ದಾವಣಗೆರೆ: ಬಸವಣ್ಣನವರ ಚಿಂತನೆ ಹಾಗೂ ವಚನಗಳು ಮಾನವ ಕಲ್ಯಾಣಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಹೇಳಿದರು.
ಹೊರವಲಯದ ಆವರಗೆರೆ ಗ್ರಾಮದಲ್ಲಿ ಭಾನುವಾರ, ಕಾಯಕಯೋಗಿ ಬಸವ ಪರಿಸರ ಸಂರಕ್ಷಣಾ ವೇದಿಕೆ ಮತ್ತು ವಿನಾಯಕ ಭಜನಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಬಸವಣ್ಣನವರು ಮಾನವತಾವಾದಿ ಮತ್ತು ಶ್ರೇಷ್ಠ ಚಿಂತಕರಾಗಿದ್ದರು. 12ನೇ ಶತಮಾನದಲ್ಲಿ ಅವರು ಆರಂಭಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತಿನ ಪರಿಕಲ್ಪನೆಯಾಗಿದೆ ಎಂದು ಹೇಳಿದರು.
ಬಸವಣ್ಣನವರ ಆದರ್ಶಗಳ ತಳಹದಿಯಲ್ಲಿ ಬಸವ ಪರಿಸರ ವೇದಿಕೆಯು  ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದೆ. ಗ್ರಾಮೀಣ ಸೊಗಡಿನ ಆಚರಣೆಗಳು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದರು.
ಮುಖಂಡ ಆವರಗೆರೆ ಬಾನಪ್ಪ ಪ್ರಾಸ್ತಾವಿಕ ಮಾತನಾಡಿ, ಬಸವ ಪರಿಸರ ವೇದಿಕೆ ಇಡೀ ಗ್ರಾಮವನ್ನು ಹಸಿರು ತಾಣವನ್ನಾಗಿ ಮಾಡಿದ್ದು, ಬಿಡುವಿನ ವೇಳೆಯಲ್ಲಿ ಗ್ರಾಮೀಣ ಬದುಕಿನ ರೈತರು ಉಪಯೋಗಿಸುತ್ತಿದ್ದ ವಸ್ತುಗಳನ್ನೇ ಕಲಾತ್ಮಕವಾಗಿ ಗ್ರಾಮಗಳಲ್ಲಿ ಸ್ಥಾಪಿಸುವ ಮೂಲಕ ಗ್ರಾಮೀಣ ಭಾರತವನ್ನು ಪರಿಚಯಿಸಿದ್ದಾರೆ ಎಂದು ತಿಳಿಸಿದರು.
ಶಿಕ್ಷಕ ಗುರುಸಿದ್ಧಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ವಿಜ್ಞಾನ ಮತ್ತು ಪರಿಸರ ಸಂಯೋಗವಾದಾಗ ಮಾನವನ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಟಿ.ರುದ್ರಪ್ಪ ಮಾತನಾಡಿ,  ಯುವ ಸಮೂಹ ಮೊಬೈಲನ್ನು ಬದಿಗೊತ್ತಿ ಗಿಡ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಪಿ. ಮಲ್ಲಿಕಾರ್ಜುನ, ತಿಪ್ಪೇಶ್, ಹಾಲೇಶಣ್ಣ, ಡಿ.ಕರಿಬಸಣ್ಣ, ಸಿಎಂ ಅರುಣ್, ಕೆರನಹಳ್ಳಿ ರಾಜು, ಮಹಾಂತೇಶ್, ಗೋಪಿನಾಥ್, ಶಾಮಿಯಾನ ವೀರೇಶ್ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮೀಣ ಸೊಗಡಿನ ಎತ್ತಿನಗಾಡಿಯಲ್ಲಿ ಬಸವಣ್ಣನವರ ಭಾವಚಿತ್ರ ಇರಿಸಿ, ಭಜನೆಯ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net