ಪಹಣಿಗೆ ಆಧಾರ್ ಜೋಡಣೆ ರಾಜ್ಯದಲ್ಲೇ ತೃತೀಯ     ಕಂದಾಯ ಅಧಿಕಾರಿಗಳ ಸಭೆಯಲ್ಲಿ ಡಿಸಿ ವೆಂಕಟೇಶ್ ಮಾಹಿತಿ

1000185922_20240616001534679.jpg
Published on

ದಾವಣಗೆರೆ: ಕಂದಾಯ ಇಲಾಖೆ ಡಿಜಿಟಲೀಕರಣವಾಗುತ್ತಿದ್ದು ಜಮೀನಿನ ಮಾಲೀಕರ ಪಹಣಿಗೆ ಆಧಾರ್ ಜೋಡಣೆಯೊಂದಿಗೆ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಶೇ 64.73 ರಷ್ಟು ಖಾತೆದಾರರ ಆಧಾರ್‌ನ್ನು ಪಹಣಿಗೆ ಜೋಡಿಸಿದ ದಾವಣಗೆರೆ ಜಿಲ್ಲೆ, ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
ದಾವಣಗೆರೆ ತಾಲೂಕಿನ ಉಳುಪಿನಕಟ್ಟೆ ಬಳಿಯ ವಿಜ್ಞಾನ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, 425708 ಖಾತೆದಾರರ ಆಧಾರ್ ಜೋಡಣೆ ಮಾಡಲಾಗಿದೆ. ಭೂ ಪರಿವರ್ತನೆಯಾದ 1,09,955 ಸೇರಿ 5,35,663 ಆಧಾರ್ ಜೋಡಣೆಯಾಗಿದೆ ಎಂದು ಹೇಳಿದರು.
ಕೆಲವು ಖಾತೆದಾರರ ಮೂಲ ಮಾಲೀಕರು ಮೃತರಾಗಿದ್ದರೂ ಅವರ ಹೆಸರಿನಲ್ಲಿಯೇ ಪಹಣಿ ಚಾಲ್ತಿಯಲ್ಲಿವೆ.  ಮುಂದಿನ ದಿನಗಳಲ್ಲಿ ಪೌತಿ ಖಾತೆ ಆಂದೋಲನ ಕೈಗೊಳ್ಳುವ ಮೂಲಕ ಖಾತೆ ಬದಲಾವಣೆ ಮಾಡಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.  
ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ ಜಿಯೋ ಫೆನ್ಸಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದ್ದು ಜಿಲ್ಲೆಯಲ್ಲಿ 19,408 ಸರ್ಕಾರದ ಆಸ್ತಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹರಿಹರ 2599, ಜಗಳೂರು 2662, ದಾವಣಗೆರೆ 5664, ಹೊನ್ನಾಳಿ 2482, ಚನ್ನಗಿರಿ 3672, ನ್ಯಾಮತಿ 2329 ಆಸ್ತಿಗಳಿವೆ. ಇದರಲ್ಲಿ 10956 ಆಸ್ತಿಗಳನ್ನು ಗುರುತಿಸಿ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಉಳಿದ 8452 ಆಸ್ತಿಗಳನ್ನು ರಕ್ಷಣೆ ಮಾಡಲು ತಿಳಿಸಿದರು.
 ಕಂದಾಯ ಗ್ರಾಮ: ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ಘೋಷಣೆಗೆ 81 ಪ್ರಸ್ತಾವನೆಗಳಿದ್ದು ಈಗಾಗಲೇ 35 ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇನ್ನುಳಿದ ಗ್ರಾಮಗಳನ್ನು ಆದಷ್ಟು ಬೇಗನೆ ಅಧಿಸೂಚನೆ ಹೊರಡಿಸಲು ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.  
ಕಂದಾಯ ಇಲಾಖೆಯಲ್ಲಿ ಎಲ್ಲಾ ಹಂತದಲ್ಲಿ ಆಡಳಿತವನ್ನು ಇ-ಕಚೇರಿ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. ಜೂ.13 ರವರೆಗೆ ಸ್ವೀಕರಿಸಲಾದ 2,25,952 ಅರ್ಜಿಗಳಲ್ಲಿ 2,20,847 ಅನ್ನು ಕ್ರಮಕ್ಕಾಗಿ ಕಳುಹಿಸಲಾಗಿದೆ. 16428 ಕಳುಹಿಸಲು ಬಾಕಿ ಇದ್ದು, 63399 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ಕಡತಗಳಲ್ಲಿ 25391 ಕಡತ ತೆರೆಯಲಾಗಿದ್ದು ಒಟ್ಟು 74709 ಸ್ವೀಕರಿಸಿ ಮುಂದಿನ ಹಂತಕ್ಕೆ ಕಳುಹಿಸಲಾಗಿದೆ. ಇದರಲ್ಲಿ 9621 ಬಾಕಿ, 12643 ಇತ್ಯರ್ಥ ಮಾಡಿದ್ದು 2062 ಪ್ರಗತಿಯ ಹಂತದಲ್ಲಿವೆ.
1750 ಎಕರೆಯ ಕೆರೆ ಒತ್ತುವರಿ ಬಾಕಿ
ಜಿಲ್ಲೆಯಲ್ಲಿ 538 ಕೆರೆಗಳಿದ್ದು 23292 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುತ್ತದೆ. ಇದರಲ್ಲಿ 486 ಕೆರೆಗಳ ಅಳತೆ ಮಾಡಿ 16604.22 ಎಕರೆ ವಿಸ್ತೀರ್ಣ ಗುರುತಿಸಲಾಗಿದೆ. 52 ಕೆರೆಗಳಿಂದ 6687.24 ಎಕರೆ ಅಳತೆಗೆ ಬಾಕಿ ಇರುತ್ತದೆ.
ಅಳತೆ ಮಾಡಿದ 283 ಕರೆಗಳಲ್ಲಿ 1816.39 ಎಕರೆ ಒತ್ತುವರಿ ಪ್ರದೇಶವೆಂದು ಗುರುತಿಸಿ 37 ಕೆರೆಗಳ 66.38 ಎಕರೆ ವಿಸ್ತೀರ್ಣ ತೆರವು ಮಾಡಲಾಗಿದೆ. ಇನ್ನೂ 246 ಕೆರೆಗಳ 1750 ಎಕರೆ ವಿಸ್ತೀರ್ಣ ತೆರವಿಗೆ ಬಾಕಿ ಇದ್ದು 203 ಕೆರೆಗಳು 14787 ಎಕರೆ ವಿಸ್ತೀರ್ಣದಲ್ಲಿದ್ದು ಯಾವುದೇ ಒತ್ತುವರಿಯಾಗಿರುವುದಿಲ್ಲ. ಶೀಘ್ರದಲ್ಲಿ  ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
 538 ಕೆರೆಗಳಲ್ಲಿ 212 ಪಂಚಾಯತ್‌ರಾಜ್ ವಿಭಾಗ, 82 ಸಣ್ಣ ನೀರಾವರಿ, 36 ಜಲಸಂಪನ್ಮೂಲ ಇಲಾಖೆ, 2 ಮಹಾನಗರ ಪಾಲಿಕೆ, 144  ಗ್ರಾಮ ಪಂಚಾಯತ್ ಕೆರೆ, 28 ಅರಣ್ಯ, ಕೆಪಿಸಿಎಲ್ 2, ಎಸ್‌ಎಸ್‌ಎಲ್‌ಆರ್ 2 ಹಾಗೂ ಇತರೆ 30 ಸೇರಿವೆ ಎಂದು ವಿವರಿಸಿದರು.  ಇದೇ ವೇಳೆ ಆಧಾರ್ ಜೋಡಣೆಗೆ ಸಹಕಾರ ನೀಡಿದ ಗ್ರಾಮ ಆಡಳಿತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
 ಸಭೆಯಲ್ಲಿ ಎಡಿಸಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಅಭಿಷೇಕ್, ಡಾ.ಬಿ.ಎನ್. ಅಶ್ವಥ್ ಸೇರಿ ವಿವಿಧ ತಾಲೂಕಿನ ತಹಸೀಲ್ದಾರ್‌ಗಳಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net