ಹಳ್ಳಿಗರಿಗೂ ರೂಪಿಸಿ ಯೋಗಪಾಠ

pixlr_20250623094622372.jpg
Published on

ದಾವಣಗೆರೆ: ಜಿಲ್ಲೆಯಲ್ಲಿ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಬೇಕು. ಇದಕ್ಕಾಗಿ ಯೋಗ ಶಿಕ್ಷಕರು ಗ್ರಾಮೀಣ ಭಾಗಗಳಲ್ಲಿ ಯೋಗ ಪರಿಚಯಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಸಹಯೋಗದಲ್ಲಿ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ 11ನೇ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ 145 ಕೋಟಿ ಜನಸಂಖ್ಯೆ ಇದೆ. ಆದರೆ ಯೋಗ ಎಷ್ಟು ಮಂದಿ ಮಾಡುತ್ತಿದ್ದಾರೆ ಎಂಬುದೂ ಮುಖ್ಯವಾಗಿದೆ. ಯೋಗ ಕಲಿತವರು ತಿಂಗಳಿಗೊಮ್ಮೆ ಹಳ್ಳಿಗಳಿಗೆ ಭೇಟಿ ಮಾಡಿ ಅಲ್ಲಿನ ಜನರಿಗೆ ಕನಿಷ್ಠ 21 ದಿನದ ಯೋಗ ಕಲಿಸಲು ಯೋಜನೆ ರೂಪಿಸಬೇಕು.

ಗ್ರಾಮೀಣ ಜನರಲ್ಲೂ ಶಿಸ್ತಿನ ಜೀವನಶೈಲಿ ಮೂಡಿಸಿ. ವಿಶೇಷವಾಗಿ ಮಹಿಳೆಯರಲ್ಲೂ ಖಿನ್ನತೆ, ಆತಂಕಗಳಿವೆ. ಅವರಿಗೂ ಮನವರಿಕೆ ಮಾಡಿ ಯೋಗ ಕಲಿಸಬೇಕು. ಈ ಮೂಲಕ ಕೇಂದ್ರ ಆಯುಷ್ ಸಚಿವಾಲಯಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದರು.

ದೈಹಿಕ ಚಟುವಟಿಕೆ ಒಂದರಿಂದಲೇ ಆರೋಗ್ಯ ಸುಧಾರಿಸದು. ಆರೋಗ್ಯ ಎಂಬುದು ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ಥೃದ ಮೇಲೆ ಅವಲಂಬಿತವಾಗಿದೆ. ನಾವು ಭಾವನಾತ್ಮಕ, ಆಧ್ಯಾತ್ಮಿಕ ಸ್ವಾಸ್ಥೃ ಸಾಧನೆ ಮಾಡಲು ಕೂಡ ಪುರಾತನ ಕಾಲದ ಯೋಗವನ್ನು ಅನುಸರಿಸಬೇಕು ಎಂದು ಹೇಳಿದರು.

ಅನೇಕ ಭಾರತೀಯ ಯೋಗಗುರುಗಳು ವಿದೇಶಗಳಲ್ಲಿ ಯೋಗ ಕೇಂದ್ರ ತೆರೆದು ಯೋಗ ಕಲಿಸುವ ಜತೆಗೆ ಭಾರತೀಯ ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ. ಯೋಗ ವಿಶ್ವ ಮಟ್ಟದಲ್ಲಿ ಬೆಳೆದಿದ್ದು ವಿದೇಶೀಯರೂ ಅದರ ಮಹತ್ವ ಅರಿತಿದ್ದಾರೆ. ಯೋಗದ ಜತೆಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಗ ಶಿಕ್ಷಕರೂ ಆಗುತ್ತಿದ್ದಾರೆ ಎಂದು ತಿಳಿಸಿದರು.

ಶಿಸ್ತುರಹಿತ ಜೀವನಶೈಲಿ ಬಿಪಿ, ಮಧುಮೇಹ, ಸ್ಥೂಲಕಾಯ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳನ್ನು ತರಲಿದೆ. ಇವನ್ನು ನಿಯಂತ್ರಿಸಲು ನಿತ್ಯ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ರೂಡಿಸಿಕೊಳ್ಳಬೇಕು.

ಯೋಗದಿಂದ ಏಕಾಗ್ರತೆ ಸಿದ್ಧಿಸಲಿದೆ. ಕೋವಿಡ್ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯೂ ವೃದ್ಧಿಸಿದೆ. ಯೋಗ ಕಲಿತವರು ತಮ್ಮ ಕುಟುಂಬ, ಪರಿಚಯಸ್ಥರಿಗೆ ಯೋಗ ಹೇಳಿಕೊಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಐದು ವರ್ಷದ ಹಿಂದೆ ನನಗೂ ಮೊದಲು ಬಿಪಿ, ಶುಗರ್ ಪ್ರಮಾಣ ಹೆಚ್ಚಿತ್ತು. ಅಸಾಧ್ಯವಾದ ಗ್ಯಾಸ್, ಮಲಬದ್ಧತೆ ಸಮಸ್ಯೆ ಇತ್ತು. ಯೋಗ-ಧ್ಯಾನದಿಂದ ಅದು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿಕೊಂಡರು.

ಗಂಟೆಗಟ್ಟಲೆ ಯೋಗ ಮಾಡಬೇಕಿಲ್ಲ. 10 ನಿಮಿಷ ಧ್ಯಾನ ಸಾಕು. ಅದು ಮನಸ್ಸಿಗೆ ಸಮಾಧಾನ ನೀಡಲಿದೆ. ದಿನದಲ್ಲಿ ಕನಿಷ್ಠ 10-15 ನಿಮಿಷವಾದರೂ ಯೋಗ ಮಾಡಬೇಕು. ಮೈಮುರಿದು ಯೋಗ ಮಾಡಬೇಕೆಂದೇನೂ ಇಲ್ಲ. ದೇಹ ಅನುಮತಿಸುವ ಒಂದೆರಡು ಆಸನಗಳ ಅಭ್ಯಾಸವಿರಲಿ ಎಂದು ಕಿವಿಮಾತು ಹೇಳಿದರು.

ಜಿಪಂ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್ ಮಾತನಾಡಿ ಎಸ್ಸೆಸ್ಸೆಲ್ಸಿ, ಪಿಯುಸಿ, ನೀಟ್, ಜೆಇಇ, ಸ್ಪರ್ಧಾತ್ಮಕ ಪರೀಕ್ಷೆ ಹಿನ್ನೆಲೆಯಲ್ಲಿ ಹೆಚ್ಚಿನ ಅಂಕ ಪಡೆಯುವ ಮತ್ತು ಭವಿಷ್ಯದ ಬಗ್ಗೆ ಆತಂಕದಿಂದ ವಿದ್ಯಾರ್ಥಿಗಳಲ್ಲಿ ಒತ್ತಡ ಸಹಜವಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಭಯ ಬಿಟ್ಟು ಮೊದಲು ಆರೋಗ್ಯದ ಕಡೆ ಗಮನ ನೀಡಬೇಕು. ಯೋಗ-ಧ್ಯಾನ ಮಾಡಬೇಕು ಎಂದರು.

ಸಂಸದರ ಸಲಹೆಯಂತೆ ಪಿಡಿಒಗಳ ಮೂಲಕವಾಗಿ ಪ್ರತಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಯೋಗ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಯೋಗಗುರು ವೈದ್ಯಶ್ರೀ ಜ್ಯೋತಿ ಚನ್ನಬಸವಣ್ಣ ಅವರು ಅಧಿಕಾರಿಗಳು, ಶಾಲಾ ಮಕ್ಕಳು, ಯೋಗ ಶಿಕ್ಷಕರೊಂದಿಗೆ ಸಾಮೂಹಿಕ ಯೋಗ ಮಾಡಿದರು. 20ಕ್ಕೂ ಹೆಚ್ಚು ಯೋಗಾಸನಗಳ ಭಂಗಿಗಳನ್ನು ಪರಿಚಯಿಸುವ ಜತೆಯಲ್ಲೇ ಅದರಿಂದಾಗುವ ಆರೋಗ್ಯ ಲಾಭಗಳ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ಪಿ ಉಮಾ ಪ್ರಶಾಂತ್, ಈಶ್ವರೀಯ ವಿವಿ ಸಂಚಾಲಕಿ ರಾಜಯೋಗಿನಿ ಲೀಲಾಜಿ, ಡಿಎಚ್‌ಒ ಡಾ. ಷಣ್ಮುಖಪ್ಪ, ಆಯುಷ್ ಇಲಾಖೆ ಅಧಿಕಾರಿ ಬಿ.ಯು. ಯೋಗೇಂದ್ರಕುಮಾರ್, ಡಿಡಿಪಿಐ ಎಚ್. ಕೊಟ್ರೇಶ್, ಡಿಡಿಪಿಯು ಎಸ್.ಜಿ. ಕರಿಸಿದ್ದಪ್ಪ, ಎಎಸ್ಪಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net