

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಜೂ.21 ರಂದು ಅಂತಾರಾಷ್ಟ್ರೀಯ ಯೋಗದಿನ ಆಯೋಜಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಯೋಗೇಂದ್ರಕುಮಾರ್ ಹೇಳಿದರು.
ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗದಿನದ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಧ್ಯೇಯವಾಕ್ಯದೊಂದಿಗೆ ಯೋಗದಿನ ಆಚರಿಸಲಾಗುತ್ತಿದೆ. ಜಿಲ್ಲೆಯ ಶಾಲಾ-ಕಾಲೇಜು, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳ ವಿದ್ಯಾರ್ಥಿಗಳು ಸೇರಿ ಸುಮಾರು 5 ಸಾವಿರ ಜನರು ಭಾಗವಹಿಸಲಿದ್ದಾರೆ. ಜಾಗ ಅಂತಿಮಗೊಳ್ಳಬೇಕಿದೆ ಎಂದು ತಿಳಿಸಿದರು.
ಯೋಗ ದಿನಾಚರಣೆ ಪ್ರಯುಕ್ತ ಜೂ.10 ರಿಂದ 20ರ ವರೆಗೆ ಯೋಗೋತ್ಸವ ಆಚರಿಸುತ್ತಿದ್ದು, ಯೋಗ ರಸಪ್ರಶ್ನೆ, ಕ್ರೀಡೆ, ಸಮೂಹ ನೃತ್ಯ, ಆಶುಭಾಷಣ, ಬೋಧನಾ ಕೌಶಲ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಡಿಜಿಟಲ್ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ಜೂ.21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ. ಮನಸ್ಸು, ದೇಹ, ಆತ್ಮವನ್ನು ಒಳಗೊಳ್ಳುವ ಅಭ್ಯಾಸವಾಗಿದೆ. ಪ್ರತಿ ವರ್ಷದಂತೆ ಒಕ್ಕೂಟದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಹಾಗೂ ವಾಕಾಥಾನ್ ಆಯೋಜಿಸುತ್ತಿದ್ದು, ಎಲ್ಲರೂ ಪಾಲ್ಗೊಳ್ಳುವಂತೆ ಕೋರಿದರು.
ಸರ್ಕಾರಿ ಪ್ರಕೃತಿ ಚಿಕಿತ್ಸೆ ಆಡಳಿತ ವೈದ್ಯಾಧಿಕಾರಿ ಡಿ.ಎಂ. ರತ್ನಾ, ವೈದ್ಯಾಧಿಕಾರಿ ಡಾ. ಸಿದ್ದೇಶ್ ಈ ಬಿಸನಳ್ಳಿ, ಸುರೇಶ್, ಈಶ್ವರೀಯ ವಿಶ್ವವಿದ್ಯಾನಿಲಯದ ಬ್ರಹ್ಮಕುಮಾರಿ ಲೀಲಾಜಿ, ಕೆಜಿಎಎಂಒಎನ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಬೂದಿಹಾಳ ಇತರರಿದ್ದರು.