ಶರಣ ಸಾಹಿತ್ಯ ಪರಿಷತ್ತಿಗೆ ಬೇಕು ಯುವಪಡೆ   ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಆಶಯ

1000378083.jpg
Published on


ದಾವಣಗೆರೆ: ಶರಣ ಸಾಹಿತ್ಯ ಪರಿಷತ್ತು ಯುವಕರನ್ನು ಸಂಘಟಿಸುವ, ತರಬೇತಿಗೊಳಿಸುವ ಅಗತ್ಯವಿದೆ ಎಂದು ಗದಗ್‌ನ ಶ್ರೀ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಆಶಿಸಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಸರ್ವ ಸದಸ್ಯರ 30ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಶರಣ ಸಾಹಿತ್ಯ ಪರಿಷತ್ತನ್ನು  60 ವರ್ಷ ಮೀರಿದವರು ಅಥವಾ ಹಿರಿಯ ನಾಗರಿಕರ ಸಂಘಟನೆ ಎಂದು ಕರೆಯಬೇಕೆ ಎಂಬುದು ತಿಳಿದಿಲ್ಲ. ಯುವಕರಲ್ಲಿ ಪ್ರಚಂಡ ಶಕ್ತಿಯನ್ನು ಸಂಸ್ಥೆಯಲ್ಲಿ ಮುಂದುವರಿಸಬೇಕಿದೆ. ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಕಲ್ಪಿಸುವ ಜವಾಬ್ದಾರಿ ಸಂಸ್ಥೆಯ ಪದಾಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.
ಶರಣ ಸಾಹಿತ್ಯ ಬೇರ್ಪಡಿಸಿದರೆ ಕನ್ನಡ ಸಾಹಿತ್ಯದಲ್ಲಿ ಶೂನ್ಯ ಆವರಿಸಲಿದೆ. ಭಾಷೆ-ಸಂಸ್ಕೃತಿಗೆ ಗೌರವ ತಂದಿರುವುದೇ ವಚನ ಸಾಹಿತ್ಯ. ನಮ್ಮ ಜೀವನದಲ್ಲಿ ಸನ್ಮಾರ್ಗ ತೋರಿಸುವ, ವಿಶ್ವ ಮನ್ನಣೆಯ ಹಾಗೂ ಮೌಲಿಕವಾದ ಈ ಸಾಹಿತ್ಯವನ್ನು ಹೆಚ್ಚು ಬೆಳೆಸಬೇಕಿದೆ ಎಂದರು.
ಅಹಂಕಾರ, ಆಮಿಷವುಳ್ಳ ಶರೀರವೆಂಬ ಬಂಡಿಗೆ ಶರಣರ ಸುಂದರ ಸಾಹಿತ್ಯವೇ ಕಡೆಗೀಲು ಎಂಬುದನ್ನು ಜೇಡರ ದಾಸಿಮಯ್ಯ ವಚನದಲ್ಲಿ ಹೇಳಿದ್ದಾರೆ. ವಚನಗಳನ್ನು ಪ್ರಸಾರ ಮಾಡುವುದೂ ಒಂದು ಸಮಾಜಸೇವೆ. ಇದು ಕೇವಲ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಕೆಲಸವಲ್ಲ. ಪ್ರತಿಯೊಬ್ಬರೂ ಕೈಜೋಡಿಸಿದರೆ ಶರಣ ಸಾಹಿತ್ಯ ವ್ಯಾಪಕವಾಗಿ ಬೆಳೆಯಲಿದೆ ಎಂದರು.
ಶಸಾಪ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸರಿಸಮಾನವಾಗಿ ಬೆಳೆಯುತ್ತಿದೆ. ಶರಣ ಸಾಹಿತ್ಯವನ್ನು ಜನಮನಕ್ಕೆ ತಲುಪಿಸುತ್ತಿದೆ. ಸಾಹಿತ್ಯ ಪುಸ್ತಕಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅವನ್ನು ಜನರು ಕೊಂಡು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದೂ ಹೇಳಿದರು.
ಪಾಂಡೋಮಟ್ಟಿಯ ಶ್ರೀ ಡಾ. ಗುರುಬಸವ ಸ್ವಾಮೀಜಿ ಮಾತನಾಡಿ ಹಿರಿಯರಾದ ಗೋ.ರು. ಚನ್ನಬಸಪ್ಪ ಅವರು ಒಬ್ಬ ಕನ್ನಡಿಗ ಒಂದು ರೂ. ಎಂದು ಕರೆ ನೀಡಿದ್ದರು. ಅದೇ ರೀತಿ ಒಬ್ಬ ಶರಣ ಒಂದು ಸದಸ್ಯತ್ವ ಎಂದು ಆಚರಣೆಗೆ ಬಂದಲ್ಲಿ ರಾಜ್ಯದಲ್ಲಿ ಸುಮಾರು 3 ಕೋಟಿ ಕನ್ನಡಿಗರು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವುದು ಕಷ್ಟವಲ್ಲ ಎಂದರು.
ಶರಣರ ಸಾಹಿತ್ಯದಲ್ಲಿ ಗೊಂದಲವಿಲ್ಲ. ಹೀಗಾಗಿ ಪರಿಷತ್ತಿನ ಕಾರ್ಯಗಳು ನಿರಾತಂಕದಿಮದ ನಡೆಯುತ್ತಿವೆ. ಮಹಾಮನೆ ಪುಸ್ತಕವನ್ನು ಮನೆ ಮನೆಗೆ ತಲುಪಿಸುತ್ತಿರುವ ಈ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಪರ್ಯಾಯವಾಗಿ ಬೆಳೆದುನಿಂತಿದೆ ಎಂದು ಹೇಳಿದರು.
ಪರಿಷತ್ತಿನ ರಾಜ್ಯಾಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿ ಸಂಸ್ಥೆಯ ಸದಸ್ಯತ್ವ ಅಭಿಯಾನ ಚುರುಕಾಗಬೇಕು. ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ 15ರಿಂದ 20 ಸಾವಿರ ಹೆಚ್ಚುವರಿ ಸದಸ್ಯರನ್ನು ಮಾಡಬೇಕೆಂದು ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ವಚನಕಾರರ ಜೀವನ, ಅವರು ನಡೆದುಬಂದ ಹಾದಿ ಬಗ್ಗೆ ಎಲ್ಲ ವಿವಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಸಮಾರಂಭ, ವಿಚಾರಸಂಕಿರಣ ನಡೆಸುವಂತೆ ಸರ್ಕಾರದ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಶಸಾಪ ಪದಾಧಿಕಾರಿಗಳು ಕುಲಪತಿ, ಪ್ರಾಚಾರ್ಯರು, ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ದತ್ತಿ ಕಾರ್ಯಕ್ರಮ ನಡೆಸಬಹುದು ಎಂದು ಹೇಳಿದರು.
ರಾಜ್ಯ ಕೋಶಾಧಿಕಾರಿ ಎಸ್.ಎಂ. ಹಂಪಯ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪರಿಷತ್ ಸದಸ್ಯತ್ವವನ್ನು 500 ರೂ. ಹಾಗೂ ಪರಿಷತ್ತಿನ ಮಹಾಮನೆ ಪುಸ್ತಕದ ಚಂದಾದಾರಿಕೆ ಮೊತ್ತವನ್ನು 1 ಸಾವಿರ ರೂ.ಗಳಿಗೆ ಯಥಾಸ್ಥಿತಿ ಶುಲ್ಕ ಮುಂದುವರಿಸಲು ಸಭೆ ಸಮ್ಮತಿಸಿತು. ವಚನಗಳ ಡಿಜಿಟಲೀಕರಣ ಸಂಬಂಧ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಲು ಒಪ್ಪಿತು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ್. ಲೀಲಾದೇವಿ ಆರ್. ಪ್ರಸಾದ್, ಪರಿಷತ್ತಿನ  ರಾಜ್ಯ ಗೌರವ ಸಲಹೆಗಾರ ಗೋ.ರು. ಚನ್ನಬಸಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶಿ. ಗಾಂಜಿ, ಉಪಾಧ್ಯಕ್ಷ ಅಪ್ಪಾರಾವ್ ಅಕ್ಕೊಣೆ, ಹೊನ್ನಲಿಂಗಯ್ಯ, ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ರಾಜ್ಯ ಕದಳಿ ವೇದಿಕೆ ಸಂಚಾಲಕಿ ಸುಶೀಲಾ ಸೋಮಶೇಖರ್, ಜಿಲ್ಲಾಧ್ಯಕ್ಷೆ ಗಾಯತ್ರಿ ವಸ್ತ್ರದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net