

ದಾವಣಗೆರೆ: ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಅವರು ಹೊಸ ಪಕ್ಷ ಕಟ್ಟಲು ನಾವು ಬಿಡುವುದಿಲ್ಲ. ಅವರು ಪಕ್ಷ ಕಟ್ಟಿದ್ದೇ ಆದಲ್ಲಿ ನಾವು ಬಿಜೆಪಿಯಲ್ಲೇ ಉಳಿಯಲಿದ್ದೇವೆ ಎಂದು ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್ ಸ್ಪಷ್ಟಪಡಿಸಿದರು.
ಹೊಸ ಪಕ್ಷ ಕಟ್ಟುವುದಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಸ್ವತಃ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಅವರು ಬಿಜೆಪಿಯಲ್ಲೇ ಉಳಿದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಗೆಲ್ಲುವ ಅವಕಾಶಗಳಿವೆ. ಹೀಗಾಗಿ ಅವರು ಉಚ್ಚಾಟನೆ ಹಿಂಪಡೆಯುವಂತೆ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಲಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆಯಾಗಿದ್ದರೂ ಈಗಲೂ ಅವರೇ ನಮ್ಮ ನಾಯಕರು. ರಾಜ್ಯಾಧ್ಯಕ್ಷರಿಗೆ ಅನುಭವದ ಕೊರತೆ ಇದೆ, ಅವರು ಬದಲಾಗಬೇಕೆಂಬುದು ಅವರ ಗುರಿಯಾಗಿತ್ತೇ ಹೊರತಾಗಿ ತಾವೇ ರಾಜ್ಯಾಧ್ಯಕ್ಷರಾಗುವ ಆಸೆ ಯತ್ನಾಳ್ ಅವರಿಗೆ ಇರಲಿಲ್ಲ ಎಂದು ಬಿ.ಪಿ.ಹರೀಶ್ ಹೇಳಿದರು.
ಬೆಂಗಳೂರಿನಲ್ಲಿ ಇತೀಚೆಗೆ ಸಭೆ ನಡೆಸಿದವರಿಗೆ ನೋಟಿಸ್ ಬರಲಿದೆ ಎನ್ನಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದೇಶ್ವರ ‘ನನಗೇನೂ ನೋಟಿಸ್ ಬಂದಿಲ್ಲ’ ಎಂದರು. ರಾಜ್ಯಾಧ್ಯಕ್ಷ ಸ್ಥಾನ ಬದಲಾಗಬಹುದೇ ಎಂಬ ಪ್ರಶ್ನೆಗೆ ‘ಕಾದು ನೋಡಿ’ ಎಂದು ಪ್ರತಿಕ್ರಿಯಿಸಿದರು.
ರಾಜ್ಯಾಧ್ಯಕ್ಷರು ಕರೆ ನೀಡಿದಂತೆ ಇಂದು ಎಲ್ಲೆಡೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆದಿವೆ. ನನಗೆ ಜಿಲ್ಲಾ ಘಟಕದಿಂದ ಯಾವುದೇ ಆಹ್ವಾನ ಬರಲಿಲ್ಲ. ನನ್ನನ್ನು ಮರೆತಂತೆ ಕಾಣುತ್ತದೆ ಎಂದೂ ದೂರಿದರು.
ಬಿಜೆಪಿಯಲ್ಲಿನ ಗೊಂದಲ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಮುನ್ನವೇ ಬಗೆಹರಿಯಲಿದೆ. ಇನ್ನು 15 ದಿನದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಾಗಲಿದೆ. ರಾಜ್ಯಾಧ್ಯಕ್ಷರು ಕೂಡ ಬದಲಾಗುತ್ತಾರೆ ಎಂದು ಹರೀಶ್ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಇದಕ್ಕೂ ಪೂರ್ವದಲ್ಲಿ ನಡೆದ ಜೆಪಿಸಿ ಸಮಿತಿ ಸಭೆಗೆ ಯತ್ನಾಳ್ ಅವರ ನೇತೃತ್ವದಲ್ಲಿ ನಡೆದಿದ್ದ ಹೋರಾಟವೇ ಕಾರಣವಾಯಿತು. ಇದಕ್ಕೆ ನಮಗೆ ಹೆಮ್ಮೆ ಇದೆ ಎಂದರು.
ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಪ್ರಕರಣದಲ್ಲಿ ಸರ್ಕಾರ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಗೆ ಒಳಪಡಿಸಬೇಕು. ರಾಜ್ಯ ಸರ್ಕಾರ ಏರಿಕೆ ಮಾಡಿದ ಎಲ್ಲ ಬೆಲೆಗಳನ್ನು ಇಳಿಸಬೇಕು ಎಂದು ಆಗ್ರಹಿಸಿದರು.
ಹನಿಟ್ರಾೃಪ್ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸದನದಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತನಿಖೆ ನಡೆಸಬಹುದಿತ್ತು. ಅದಕ್ಕೆ ಲಿಖಿತ ದೂರು ಬೇಕಿರಲಿಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡರು ಇದ್ದರಿಬಹುದು. ಅವರು ರಾಜಣ್ಣ ಹೇಳಿಕೆಗೆ ಕೋಪ ವ್ಯಕ್ತಪಡಿಸಿದ್ದರಿಂದ ಇದರ ಬಗ್ಗೆ ಯಾವುದೇ ಕ್ರಮ ಆಗಲಿಲ್ಲ ಎಂದು ಬಿಪಿ ಹರೀಶ್ ಬೇಸರ ಹೊರಹಾಕಿದರು.
ಮುಖಂಡರಾದ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್, ಅಣಬೇರು ಜೀವನಮೂರ್ತಿ, ಶ್ರೀನಿವಾಸ ದಾಸಕರಿಯಪ್ಪ, ದೇವರಮನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಪೊಲೀಸರಿಂದಲೇ ಗಾಂಜಾ ದಂಧೆ?
ದಾವಣಗೆರೆ ಜಿಲ್ಲೆಯಲ್ಲಿ ಗಾಂಜಾ, ಮಾದಕ ವಸ್ತುಗಳ ಹಾವಳಿ ಹೆಚ್ಚಿದೆ. ಪ್ರೌಢಶಾಲಾ ಮಕ್ಕಳೂ ಕೂಡ ಈ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಪೊಲೀಸರಿಂದಲೇ ಈ ದಂಧೆ ನಡೆಯುತ್ತಿದೆ ಎಂಬ ಆರೋಪವಿದೆ ಎಂದು ಶಾಸಕ ಬಿ.ಪಿ. ಹರೀಶ್ ದೂರಿದರು.
ಬಿಐಇಟಿ ಬಳಿ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದರೂ ಆತ ಮಾದಕ ವ್ಯಸನಿಯಾಗಿದ್ದ ಎಂಬ ಕೂಗು ಕೇಳಿಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಇದನ್ನು ಮಟ್ಟ ಹಾಕಬೇಕು. ಈ ಬಗ್ಗೆ ಖುದ್ದು ಎಸ್ಪಿ ಅವರಲ್ಲಿ ಮನವಿ ಮಾಡುವುದಾಗಿಯೂ ತಿಳಿಸಿದರು.
ನ್ಯಾಮತಿ ಎಸ್‌ಬಿಐ ಬ್ಯಾಂಕ್ ಲೂಟಿ ಪ್ರಕರಣವನ್ನು ಭೇದಿಸಿದ ಜಿಲ್ಲೆಯ ಪೊಲೀಸರ ಬಗ್ಗೆ ನನಗೆ ಗೌರವ, ಅಭಿಮಾನವಿದೆ. ಆದರೆ ಗಾಂಜಾ, ಮಾದಕ ವಸ್ತುಗಳ ಹಾವಳಿ ತಡೆಯಲಾಗಿಲ್ಲ ಎಂದರು.
----