ಯತ್ನಾಳ್ ಉಚ್ಚಾಟನೆಗೆ ರೇಣುಕಾಚಾರ್ಯ ಟೀಂ ಆಗ್ರಹ   ಶೀಘ್ರ ಆರೆಸ್ಸೆಸ್ ವರಿಷ್ಠರಿಗೆ ದೂರು

1000409566.jpg
Published on

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಟೀಕಿಸುತ್ತ ಪಕ್ಷದಲ್ಲಿ ಗೊಂದಲ, ಮುಜುಗರಕ್ಕೆ ಕಾರಣರಾದ ಶಾಸಕ ಬಸನಗೌಡ ಪಾಟೀಲ್ ನಡೆಗೆ   ಜಿಲ್ಲಾ ಬಿಜೆಪಿಯ ಒಂದು ಬಣ ಆಕ್ರೋಶ ವ್ಯಕ್ತಪಡಿಸಿದೆ.
ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನಿವಾಸದಲ್ಲಿ ಮಂಗಳವಾರ ಔಪಚಾರಿಕ ಸಭೆ ನಡೆಸಿದ ಜಿಲ್ಲಾ ಮುಖಂಡರು, ಭಿನ್ನಮತೀಯ ನಡವಳಿಕೆಯ ಯತ್ನಾಳ್ ಅವರು ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲವೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸುವಂತೆ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಲೋಕಸಭೆ ಚುನಾವಣೆಯಲ್ಲಿ ಸೋತವರು, ಟಿಕೆಟ್ ದಕ್ಕದವರು ಒಗ್ಗೂಡಿ ವಿಜಯೇಂದ್ರ ಅವರ ವರ್ಚಸ್ಸು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಯತ್ನಾಳ್ ಹೇಳಿಕೆಗಳು ಬಿಜೆಪಿ ಕಾರ್ಯಕರ್ತರಲ್ಲಿ ಬೇಸರ ತರಿಸಿವೆ. ಇಂತಹ ವಿಕೃತ ಮನಸ್ಸಿನವರಿಂದ ಪಕ್ಷ ಶುದ್ಧೀಕರಣವಾಗದು ಎಂದರು.
ಜೆಡಿಎಸ್‌ನಲ್ಲಿದ್ದಾಗ ಮುಸ್ಲಿಮರ ಟೋಪಿ ಧರಿಸಿ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿದ್ದ ಯತ್ನಾಳ್‌ಗೆ ಈಗ ಹಿಂದುತ್ವದ ನೆನಪಾಯಿತೇ? ನಿಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ಸಚಿವರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ನಿಮಗೆ ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಟೀಕಿಸುವ ನೈತಿಕತೆ ಇಲ್ಲ ಎಂದು ಪ್ರತಿಕ್ರಿಯಿಸಿದರು.
2000 ಕೋಟಿ ರೂ. ಕೊಟ್ಟವರಿಗೆ ಸಿಎಂ ಸ್ಥಾನ ಸಿಗಲಿದೆ ಎಂದು ಹೈಕಮಾಂಡ್ ವಿರುದ್ಧ ಆರೋಪಿಸಿದ್ದ ಯತ್ನಾಳ್, ಸ್ವಯಂಘೋಷಿತ ನಾಯಕರು. ಮುಂದಿನ ಮುಖ್ಯಮಂತ್ರಿ ತಾವೇ ಎಂದು ಹೇಳಿಕೊಳ್ಳುತ್ತಾ ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಹೋರಾಟದ ದಿಕ್ಕು ಬದಲಿಸಿ ವಿಷಯಾಂತರ ಮಾಡಲು 1000 ಕೋಟಿ ರೂ. ಕುರಿತ ಹೇಳಿಕೆ ನೀಡಿದ್ದಾರೆ. ಅವರು ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲವೇ ಪಕ್ಷ ಅವರನ್ನು ಉಚ್ಚಾಟಿಸಬೇಕೆಂದು ಆಗ್ರಹಿಸಿದರು.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಸಾಧ್ಯವಿಲ್ಲ. ನಾವು ಅವರ ಪರವಾಗಿದ್ದೇವೆ. ಬೆಂಗಳೂರಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಸೇರಿ ಸಭೆ ಮಾಡಲು ತೀರ್ಮಾನಿಸಿದ್ದು ದೆಹಲಿಯ ವರಿಷ್ಠರು, ಆರೆಸ್ಸೆಸ್ ಮುಖಂಡರ ಗಮನಕ್ಕೆ ಈ ವಿಚಾರ ತರಲಿದ್ದೇವೆ ಎಂದೂ ಹೇಳಿದರು.
ಬಿಜೆಪಿ ಸ್ವಚ್ಛ ಮಾಡುವುದಾಗಿ ಹೇಳುವ ರಮೇಶ್ ಜಾರಕಿಹೊಳಿ, ಮೊದಲು ವಿಕೃತ ಮನಸ್ಸಿನಿಂದ ಹೊರಬರಲಿ. ಅಸಮಾಧಾನವಿದ್ದಲ್ಲಿ ಪಕ್ಷ ಹಾಗೂ ಸಂಘ ಪರಿವಾರದೊಂದಿಗೆ ಕೂತು ಚರ್ಚಿಸಿ. ಹಾದಿಬೀದಿಯಲ್ಲಿ ಮಾತನಾಡಬೇಡಿ ಎಂದು ಹೇಳಿದರು.
ದಾವಣಗೆರೆ-ಚಿಕ್ಕೋಡಿಯಲ್ಲಿ ಬಿಜೆಪಿ ಸೋಲಿಗೆ ಮುಖಂಡರ ಸ್ವಯಂಕೃತ ಅಪರಾಧ ಕಾರಣ. ಕಾರ್ಯಕರ್ತರ ಜತೆ ಸರಿಯಾಗಿ ವರ್ತಿಸದ ಮಾಜಿ ಸಂಸದರ ನಡವಳಿಕೆ ಕಾರಣ ಎಂದೂ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್‌ಕುಮಾರ್, ಚಂದ್ರಶೇಖರ ಪೂಜಾರ್, ಕೆ.ಎಂ. ಸುರೇಶ್ ಇತರರಿದ್ದರು.

ಕಾಂಗ್ರೆಸ್ ಏಜೆಂಟರಂತೆ ವರ್ತನೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಢೋಂಗಿ ಹಿಂದುತ್ವದ ಪ್ರಚಾರ ನಿಲ್ಲಿಸಬೇಕು ಎಂದು ಮುಖಂಡ ಮಾಡಾಳು ಮಲ್ಲಿಕಾರ್ಜುನ ಹೇಳಿದರು.
ಸಿಎಂ ಅವರನ್ನು ಪಕ್ಷಾತೀತ ಬೆಂಬಲಿಸುವುದಾಗಿ ಹೇಳಿದ್ದ ಅವರು ಸಿದ್ದರಾಮಯ್ಯ ಪರ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಬಿಜೆಪಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಾವಿರ ಕೋಟಿ ರೂ.ನ ಆಪಾದನೆಗೆ ಪುರಾವೆ ತೋರಿಸಬೇಕು. ಗೃಹ ಸಚಿವರ ಪ್ರಶ್ನೆಗೆ ಯತ್ನಾಳ್ ಪ್ರತಿಕ್ರಿಯಿಸಲಿ ಎಂದರಲ್ಲದೆ ನಿಮ್ಮ ನಡವಳಿಕೆ ಬದಲಿಸಿಕೊಳ್ಳದಿದ್ದಲ್ಲಿ ನಿಮಗೆ ೇರಾವ್ ಹಾಕುತ್ತೇವೆ. ನೀವು ಹಿಂದು ಹುಲಿಯಲ್ಲ. ಬದಲಾಗಿ ಇಲಿ ಎಂದು ಟೀಕಿಸಿದರು.
ವೀರಶೈವ ಲಿಂಗಾಯತ ಒಳಪಂಗಡಗಳನ್ನು ನಿಂದಿಸುವ, ಮಠಗಳ ಬಗ್ಗೆ ಹಗುರವಾಗಿ ಮಾತನಾಡುವ ನೀವು ಮುಖ್ಯಮಂತ್ರಿ ಆಗುವುದಾದರೂ ಹೇಗೆ? ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡುವ ವಿಚಾರವನ್ನು ಸಚಿವ ಸಂಪುಟದ ಅಜೆಂಡಾದಿಂದಲೇ ತೆಗೆದು ಹಾಕಿದ್ದು ಯಾರು? ಈ ಬಗ್ಗೆ ಬಹಿರಂಗ ಚರ್ಚೆಯಾಗಲಿ ಎಂದು ಹೇಳಿದರು.

ಮತ್ತೆ ಪಕ್ಷ ಸಂಘಟನೆ ಮಾಡೋಣ
ಮತ್ತೆ ಪಕ್ಷ ಸಂಘಟನೆ ಮಾಡಿ ಮುಂಬರುವ ಚುನಾವಣೆಗಳಲ್ಲಿ ಗೆಲ್ಲೋಣ ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಸಲಹೆ ನೀಡಿದರು.
ಬಿಜೆಪಿಯ ನಾಯಕರು ಒಗ್ಗೂಡಿ ಕೆಲಸ ಮಾಡಿದಾಗೆಲ್ಲ ಗೆದ್ದಿದ್ದೇವೆ. ಶಾಮನೂರು ಶಿವಶಂಕರಪ್ಪ ಹಲವು ಬಾರಿ ಸೋಲು ಕಂಡಿದ್ದಾರೆ. ಒಂದು ಬಾರಿ ಸೋಲುಂಡಿದ್ದಕ್ಕೆ ಸಿದ್ದೇಶ್ವರ ಅಳುವುದು ಸರಿಯಲ್ಲ ಎಂದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ಬಳಿಕ ಬಿಜೆಪಿ ಚೆನ್ನಾಗಿ ಬೆಳೆಯುತ್ತಿದೆ. ಮೈಸೂರು ಪಾದಯಾತ್ರೆ ಬಳಿಕ ಕಾಂಗ್ರೆಸ್‌ಗೆ ಪೆಟ್ಟು ಬಿದ್ದಿದೆ. ಅಧ್ಯಕ್ಷ ಸ್ಥಾನ ನೀಡಿದ ವರಿಷ್ಠರನ್ನು ಅವಮಾನಿಸಬಾರದು. ಸ್ವಪಕ್ಷೀಯರು ವಿಪಕ್ಷ ಸದಸ್ಯರಂತೆ ಮಾತಾಡುವುದನ್ನು ನಿಲ್ಲಿಸಬೇಕು ಎಂದರು.
ದಾವಣಗೆರೆಯಲ್ಲಿ ಶಕ್ತಿ ಹೊಂದಿದ್ದ ಬಿಜೆಪಿ ಇಂದು ಹಾಳಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಇದಕ್ಕಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.

ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಸೋಲು ಗೊಂದಲಕ್ಕೆಡೆ ಮಾಡಿಕೊಟ್ಟಿಲ್ಲ, ಧೃತಿಗೆಡಿಸಿಲ್ಲ. ಪಕ್ಷದೊಳಗೆ ಚರ್ಚೆ ಮಾಡಲು ಅವಕಾಶವಿದೆ. ಪ್ರಮುಖರ ನಡುವೆ ಅಭಿಪ್ರಾಯ ಹಂಚಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಗೊಂದಲಗಳಿಗೆ ಇತಿಶ್ರೀ ಹಾಡಬೇಕು.  

-ಡಾ. ಎ.ಎಚ್.ಶಿವಯೋಗಿಸ್ವಾಮಿ, ವಿಪ ಮಾಜಿ ಸದಸ್ಯ.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net