ಅಸ್ತಿತ್ವ ಉಳಿಸಿಕೊಂಡ ಯಕ್ಷಗಾನ ಕಲೆ

Davangere, Yakshasaurabha, Yakshagana, Anniversary,
Published on

ದಾವಣಗೆರೆ: ಯಕ್ಷಗಾನ ಕಲೆ ಕೇವಲ ಮನರಂಜನೆಗೆ ಸೀಮಿತವಾಗದೆ ಜನರ ಆರಾಧನೆಯ ದೈವೀ ಕಲೆಯಾಗಿದೆ ಎಂದು ದಾವಣಗೆರೆ ರೆಡ್ ಕ್ರಾಸ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಹೇಳಿದರು.

ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಯಕ್ಷಸೌರಭ ಯಕ್ಷಗಾನ ಸಂಸ್ಥೆಯ 4ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಇಂದು ಸಿನಿಮಾ, ಧಾರಾವಾಹಿಗಳ ವೈಭವೀಕರಣದ ಮಧ್ಯೆಯೂ ಯಕ್ಷಗಾನ ಕಲೆ ತನ್ನ ಅಸ್ತಿತ್ವವನ್ನು ಸಮರ್ಥವಾಗಿ ಉಳಿಸಿಕೊಂಡಿದೆ. ಇದಕ್ಕೆ ಗುಣಮಟ್ಟದ ಮೌಲ್ಯವನ್ನು ಉಳಿಸಿಕೊಂಡಿರುವುದೇ ಕಾರಣ ಎಂದು ತಿಳಿಸಿದರು.

ಯಕ್ಷಗಾನದಲ್ಲಿ ಪ್ರದರ್ಶನಗೊಳ್ಳುವ ಮಹಾಭಾರತ, ರಾಮಾಯಣ ಆಧಾರಿತ ಪೌರಾಣಿಕ ಕಥೆಗಳು ಜನರಲ್ಲಿ ಅದರಲ್ಲೂ ಬಹುಮುಖ್ಯವಾಗಿ ವಿದ್ಯಾರ್ಥಿ-ಯುವ ಜನರಲ್ಲಿ ಸಂಸ್ಕಾರ ಮತ್ತು ಜ್ಞಾನ ಸಂಪತ್ತು ಬೆಳೆಸಲು ಸಹಕಾರಿಯಾಗಲಿವೆ. ಕರಾವಳಿ ಭಾಗದಲ್ಲಿ ಉದಯವಾದ ಈ ಕಲೆ ಇಂದು ವಿಶ್ವಮಾನ್ಯತೆ ಹೊಂದಲು ಅದರ ಕಲಾ ಶ್ರೀಮಂತಿಕೆ ಕಾರಣವಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಕನ್ನಡದ ಅಸ್ಮಿತೆ ಉಳಿಸುವಲ್ಲಿ ಯಕ್ಷಗಾನ ಕಲೆ ಪಾತ್ರ ದೊಡ್ಡದಿದೆ. 800 ವರ್ಷಗಳ ಇತಿಹಾಸವುಳ್ಳ ಈ ಕಲೆ ಶಾಸ್ತ್ರೀಯ ಕಲೆಯಾಗಿದೆ ಎಂದರು.

1000ಕ್ಕೂ ಅಧಿಕ ಕವಿಗಳು ಯಕ್ಷಗಾನ ಸಾಹಿತ್ಯ ಸೃಷ್ಟಿಸಿದ್ದಾರೆ. 6000ಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳು, 10 ಲಕ್ಷಕ್ಕೂ ಅಧಿಕ ಸಂಖ್ಯೆಯ ಯಕ್ಷಗಾನ ಪದ್ಯಗಳ ರಚನೆಯಾಗಿವೆ. 40ಕ್ಕೂ ಹೆಚ್ಚು ಪಿಎಚ್‌ಡಿ ಪ್ರಬಂಧಗಳು ದಾಖಲಾಗಿವೆ. ಒಂದು ಕಲಾ ಪ್ರಕಾರದ ಮೇಲೆ ಇಷ್ಟೊಂದು ಪ್ರಮಾಣದ ಸಾಹಿತ್ಯ ಚಟುವಟಿಕೆಗಳನ್ನು ಕನ್ನಡ ಭಾಷೆ ಬಳಸಿ ರಚಿಸಿರುವುದು ದಾಖಲೆಯಾಗಿದೆ ಎಂದರು.

ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಯಕ್ಷಗಾನ ಕಲೆ ಶ್ರೀಮಂತವಾಗಿದೆ. ಆದರೆ ಕಲಾವಿದರು ಮಾತ್ರ ಆರ್ಥಿಕವಾಗಿ ಸಿರಿವಂತರಾಗಿಲ್ಲ. ಈ ಕಲೆ ಮತ್ತು ಕಲಾವಿದರಿಗೆ ಸಹಕಾರ ನೀಡಬೇಕಿದೆ ಎಂದರು.

ಬಿಜೆಪಿ ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಉದ್ಯಮಿ ಮಂಜುನಾಥ ದಾಸ್, ಯಕ್ಷಸೌರಭದ ಅಧ್ಯಕ್ಷ ಸಕ್ಕಟ್ಟು ರಾಜಶೇಖರ್ ಇದ್ದರು. ಯಕ್ಷ ಸೌರಭದ ಸಂಸ್ಥಾಪಕ ಕರ್ಜೆ ಸೀತಾರಾಮ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಶೈಕ್ಷಣಿಕ ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ನಿರೂಪಿಸಿದರು. ರಾಘವೇಂದ್ರ ಪಿ.ಶೇಟ್ ಸ್ವಾಗತಿಸಿದರು. ರಾಗಿಣಿ ಮಾಲತೇಶ್ ವಂದಿಸಿದರು.

ಭಸ್ಮಾಸುರ ಮೋಹಿನಿ: ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಿ.ಸುಬ್ರಾಯ ಹೆಬ್ಬಾರ್, ಮದ್ದಳೆ ವಾದಕರಾಗಿ ಸಂಪತ್ ಆಚಾರ್ಯ ಉಡುಪಿ, ಚಂಡೆ ವಾದಕರಾಗಿ ಕಾರ್ತಿಕ್ ಧಾರೇಶ್ವರ, ವಿವಿಧ ಪಾತ್ರಧಾರಿಗಳಾಗಿ ಸಿ. ಅಮೂಲ್ಯ, ಅನಘಾ ಉಪಾಧ್ಯ, ಹರ್ಷಿತಾ ಪ್ರಸಾದ, ಅನಿರುದ್ಧ ಉಪಾಧ್ಯ, ಧನ್ಯಶ್ರೀ, ಸಹನಾ ಸೇರಿಗಾರ, ಮಾನ್ಯಶ್ರೀ, ಶ್ರೀನಿವಾಸ ಉಪಾಧ್ಯ, ಆರ್.ಭಾರ್ಗವ, ಶ್ರೀಲಕ್ಷಿ, ಸಿಂಧೂ, ರೋಹಿತ್, ಗಂಗಾ, ಸೃಜನ್ ಎಸ್.ಆಚಾರ್ಯ ಅಭಿನಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net