

ದಾವಣಗೆರೆ: ಜಾತಿ-ಧರ್ಮದ ಆಧಾರದ ಮೇಲೆ ಒಡೆದಾಳುವ ಇಂದಿನ ಕಾಲ ಮೀರಲು ಯಕ್ಷಗಾನದಂತಹ ಕಲೆಗಳ ಅಗತ್ಯವಿದೆ. ಇಡೀ ಭಾರತಕ್ಕೆ ಯಕ್ಷ ಸಂಸ್ಕೃತಿಯನ್ನು ವಿಸ್ತರಿಸಬೇಕಿದೆ ಎಂದು ಪೂರ್ವವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್. ರವಿಕಾಂತೇಗೌಡ ಆಶಯ ವ್ಯಕ್ತಪಡಿಸಿದರು.
ಯಕ್ಷಗಾನ ಪ್ರಚಾರ ಕೈಂಕರ್ಯದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಪರ್ವ ಗೌರವ ಸಮ್ಮಾನ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ, ಸಂಗೀತ, ನೃತ್ಯ, ವಿಡಂಬನೆ ಮೊದಲಾದ ಕಲಾ ಪ್ರಕಾರಗಳ ಸಮ್ಮಿಳಿತ ಕಲೆಯೇ ಯಕ್ಷಗಾನ. ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು.
ಮನುಷ್ಯನ ಹೃದಯದಲ್ಲಿ ತೇವ ಇಟ್ಟುಕೊಳ್ಳದಿದ್ದರೆ, ಎದೆಯ ಪಸೆ ಹಾರಿಹೋದರೆ ಮನುಷ್ಯರಾಗಿ ಉಳಿಯುವುದಿಲ್ಲ. ನಾವೂ ಕೂಡ ಮೃಗಗಳಾಗಿ ಬಿಡುವ ಅಪಾಯವಿದೆ. ಹೀಗಾಗಿ ಯಕ್ಷಗಾನದಂಥಹ ಕಲೆ ನಮ್ಮನ್ನು ಮಾನವೀಯತೆಯತ್ತ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಮಾನವರ ನಡುವಿನ ದ್ವೇಷದ ವಾತಾವರಣ, ಜಾತಿ-ಧರ್ಮದ ವಿಷವರ್ತುಲದ ಇಂದಿನ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ
ಮಾನವೀಯ ಸಂಬಂಧಗಳನ್ನು ಬೆಸೆಯಲು ಕಾರಣವಾಗಲಿವೆ. ಇಂಥಹ ಕಲಾ ಪ್ರಾಕಾರಗಳನ್ನು ಕನ್ನಡ ಜನಮಾನಸದಲ್ಲಿ ಉಳಿಸುವುದು ಮುಖ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಎಲ್ಲ ಪ್ರಕಾರದ ಕಲೆಗಳನ್ನು ಪಾಲನೆ ಮಾಡುವ ಗುರುತರ ಜವಾಬ್ದಾರಿ ಕಸಾಪದ ಮೇಲಿದೆ. ಕನ್ನಡದ ಬೆಳವಣಿಗೆಗೆ ಸರ್ಕಾರದ ಅನುದಾನದ ಅಗತ್ಯವಿದೆ. ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ದಾವಣಗೆರೆ ಸಿದ್ಧವಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಯಕ್ಷಗಾನ ನವರಸ ಹೊಂದಿರುವ ಕಲೆ. ಇಂಥಹ ಕಲೆಗೆ ಡಾ.ಶಿವರಾಮ ಕಾರಂತರು ಕೂಡ ನೀಡಿದ ಕೊಡುಗೆ ಅಪಾರವಾಗಿದೆ. ಮಧ್ಯ ಕರ್ನಾಟಕದ ಈ ನೆಲದಲ್ಲಿ ಕಲಾ ಪ್ರಾಕಾರಗಳು, ಸಾಹಿತ್ಯಕ್ಕೆ ಉತ್ತೇಜಿಸುವ ಮನಸುಗಳಿವೆ ಎಂದು ಹೇಳಿದರು.
ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷ ಎಚ್. ಜನಾರ್ಧನ ಹಂದೆ ಮಾತನಾಡಿ. ಶುದ್ಧ ಯಕ್ಷಗಾನ ವೀಕ್ಷಿಸಿದರೆ ಪೌರಾಣಿಕ ಕಾಲದ ಅನುಭೌ ತರಲಿದೆ. ಈ ಪರಂಪರೆ ಮುಂದುವರಿಯಬೇಕಿದೆ. ಕವಿಗಳಿಗೂ ಯಕ್ಷಗಾನ ಸಾಹಿತ್ಯ ರಚನೆಗೆ ಪ್ರಭಾವಿ ಕಲೆಯಾಗಿದೆ ಎಂದು ಹೇಳಿದರು.
ಸುವರ್ಣ ಪರ್ವ ಗೌರವ ಪುರಸ್ಕಾರ ಸ್ವೀಕರಿಸಿದ ಯಕ್ಷಗುರು ಹಟ್ಟಿಯಂಗಡಿ ಆನಂದ ಶೆಟ್ಟಿ ಮಾತನಾಡಿ, 50 ವರ್ಷಗಳಿಂದ ಮಕ್ಕಳ ಮೇಳ ಯಕ್ಷಗಾನ ಎಂದೂ ಕೂಡ ಸಂಪ್ರದಾಯವನ್ನು ಮೀರಿಲ್ಲ. ಸಂಸ್ಥೆಯ ಪ್ರದರ್ಶನಗಳು ಇಂದಿಗೂ ಮೂಲ ಸಾಹಿತ್ಯ, ಸಂಗೀತ, ಅಭಿಯನವನ್ನು ಉಳಿಸಿಕೊಂಡು ಬಂದಿದೆ ಎಂದರು.
ಯಕ್ಷರಂಗ-ಯಕ್ಷಗಾನ ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ಮಾತನಾಡಿದರು. ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಕೆ.ಮಹೇಶ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡರಾದ ಎಚ್.ಜಿ.ಉಮೇಶ್ ಆವರಗೆರೆ, ಕೆ.ವಿಶ್ವನಾಥ್ ಬಿಲ್ಲವ, ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ, ಯಕ್ಷರಂಗ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ ಕುಮಾರ್ ಶೆಟ್ಟಿ, ರಾಘವೇಂದ್ರ ನಾಯರಿ ಇದ್ದರು.
ಕಾರ್ಯಕ್ರಮ ನಂತರ, ಉತ್ತರ ಕನ್ನಡ ಜಿಲ್ಲೆಯ ಜಲವಳ್ಳಿ ವಿದ್ಯಾಧರರಾವ್ ಸಾರಥ್ಯದ ಕಲಾಧರ ಯಕ್ಷರಂಗ ಬಳಗದ ಕಲಾವಿದರಿಂದ ‘ಶ್ರೀ ರಾಮಾಂಜನೇಯ ಯುದ್ಧ’ ಪೌರಾಣಿಕ ಕಥಾನಕದ ಯಕ್ಷಗಾನ ಪ್ರದರ್ಶನ ಸಾದರಗೊಂಡಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಯಕ್ಷರಂಗ ಸಂಸ್ಥೆ, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.
---