

ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದಾಗಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಭಾರತಕ್ಕಾಗಿ ಮೋದಿ ಕೈ ಬಲಪಡಿಸಬೇಕು ಎಂದು ಮೈಸೂರಿನ ಮಹಾರಾಜ, ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ದಾವಣಗೆರೆ ನಗರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ರೋಡ್ ಶೋ ಮೂಲಕ ಮತ ಪ್ರಚಾರ ನಡೆಸಿದ ಅವರು ಶಿವಪ್ಪಯ್ಯ ವೃತ್ತ, ಕೆ.ಬಿ.ಬಡಾವಣೆಯಲ್ಲಿ ಮಾತನಾಡಿದರು.ಮೈಸೂರು ಅರಸರು ಕನ್ನಡಿಗರ ಪರಂಪರೆ ಉಳಿಸಿದರೆ ಮೋದಿ ಅವರು ರಾಷ್ಟ್ರದ ಪಾರಂಪರಿಕ ತಾಣಗಳನ್ನು ರಕ್ಷಿಸುತ್ತಿದ್ದಾರೆ. ಅವರ ಅವಧಿಯಲ್ಲಿ ಹೆಚ್ಚಿನ ಕೆಲಸ ಆಗಿವೆ.65 ವರ್ಷದಲ್ಲಿ 96 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾಗೂ 3.25 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆ ವೃದ್ಧಿ ಆಗಿದ್ದವು. 10 ವರ್ಷದಲ್ಲಿ 1.5ಲಕ್ಷ ಕಿಮೀ. ಹೆದ್ದಾರಿ, 3.75 ಲಕ್ಷ ಕಿ.ಮೀ.ಹೆದ್ದಾರಿ ನಿರ್ಮಾಣವಾಗಿವೆ. ಅವರ ಜನೌಷಧ ಕೇಂದ್ರಗಳಲ್ಲಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧ ಸಿಗುತ್ತಿದೆ ಎಂದು ಹೇಳಿದರು.
ಮೋದಿ ಕಾಲದಲ್ಲೂ ಸುವರ್ಣಯುಗ
ಮೈಸೂರು ಅರಸರು ಸಿಲ್ಕ್‌ಬಟ್ಟೆ, ಸೋಪು ಇತ್ಯಾದಿ ವಸ್ತುಗಳಿಗೆ ಬ್ರಾೃಂಡಿಂಗ್ ಕಲಿಸಿದ್ದರು. ಪ್ರಧಾನಿ ಮೋದಿ ಕೂಡ ಮೇಕ್ ಇನ್ ಇಂಡಿಯಾ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದ್ದರು. ಮಹಿಳಾ ಮೀಸಲಾತಿ ಜಾರಿಗೊಳಿಸಿದ್ದಾರೆ. ಮೈಸೂರು ಕಾಲದಂತೆ ಮೋದಿ ಕಾಲದಲ್ಲೂ ಸುವರ್ಣ ಯುಗ ಆರಂಭವಾಗಿದೆ. ಅದುವೇ 2047ರ ವಿಕಸಿತ ಭಾರತ ಆಗಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದು ತಿಳಿಸಿದರು.
ಸಂಸದ ಜಿಎಂ ಸಿದ್ದೇಶ್ವರ 20 ವರ್ಷದಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ನಿರ್ವಹಿಸಿದ್ದಾರೆ. ಕ್ಷೇತ್ರದ ಅಭ್ಯರ್ಥಿ, ಗಾಯತ್ರಿ ಸಿದ್ದೇಶ್ವರ ಅವರನ್ನು ಈ ಬಾರಿ ಬೆಂಬಲಿಸಿ ದಾವಣಗೆರೆಯ ಅಭಿವೃದ್ಧಿ ಕೆಲಸಕ್ಕೆ ಸೇತುವೆಯಾಗಲಿದ್ದಾರೆ ಎಂದು ಹೇಳಿದರು.ಭಗತ್‌ಸಿಂಗ್ ನಗರದ ಚೌಡಮ್ಮ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ದೀಕ್ಷಿತ್ ರಸ್ತೆಯ ಗಣೇಶ ದೇವಸ್ಥಾನದವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಯದುವೀರ್, ಜನರತ್ತ ಕೈಬೀಸಿದರು.ಬಳ್ಳಾರಿ ಸಿದ್ದಮ್ಮ ಪಾರ್ಕ್ ಬಳಿ ಮಹಿಳಾ ಅಭಿಮಾನಿಗಳು ಪೂರ್ಣಕುಂಭ, ಆರತಿ ತಟ್ಟೆ ಹಿಡಿದು ಸ್ವಾಗತಿಸಿದರು. ಅವರು ತಂದಿದ್ದ ಜಯಚಾಮರಾಜ ಒಡೆಯರ್ ಭಾವಚಿತ್ರವನ್ನು ಯದುವೀರ್ ಮುಟ್ಟಿ ನಮಸ್ಕರಿಸಿದರು.ರಸ್ತೆಯುದ್ದಕ್ಕೂ ಮೋದಿ ಪರ ಹಾಗೂ ಜೈಶ್ರೀರಾಮ್ ಘೋಷಣೆ ಮೊಳಗಿತು. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಜಿಲ್ಲಾಧ್ಯಕ್ಷ ರಾಜಶೇಖರ್, ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್, ಮುಖಂಡ ಪಿ.ಸಿ.ರಾಮನಾಥ್, ಬಿ.ಎಸ್.ಜಗದೀಶ್, ಪ್ರಕಾಶ್, ಇತರರಿದ್ದರು.
ಬೆಣ್ಣೆದೋಸೆ ಸವಿದ ಮಹಾರಾಜ
ಬೆಳಗ್ಗೆ ನಗರದೇವತೆ ದುರ್ಗಾಂಬಿಕಾ ದೇವಿಗೆ ಬಿಜೆಪಿ ಅಭ್ಯರ್ಥಿಯೊಂದಿಗೆ ಪೂಜೆ ಸಲ್ಲಿಸಿದ ಯದುವೀರ್, ಎಂಸಿಸಿ ಬಿ ಬ್ಲಾಕ್‌ನ ಹೋಟೆಲ್ ಒಂದರಲ್ಲಿ ಬೆಣ್ಣೆದೋಸೆ ಸವಿದರು. ಮೈಸೂರು ಬಿಟ್ಟರೆ ದಾವಣಗೆರೆ ಊಟವೇ ಇಷ್ಟ ಎಂದು ಹೇಳಿದರು. ಅವರೊಂದಿಗೆ ಗಾಯತ್ರಿ ಸಿದ್ದೇಶ್ವರ, ಜಿ.ಎಸ್. ಅನಿತ್‌ಕುಮಾರ್ ಇತರರಿದ್ದರು.