ದಾವಣಗೆರೆಯ ಪೈಲ್ವಾನ್ ಕಿರಣಗೆ ಬೆಳ್ಳಿ ಗದೆ

Davangere wrestler Kiran wins silver medal
Published on

ಬಂಕಾಪುರ: ಬಂಕಾಪುರ ಮತ್ತು ಮುನವಳ್ಳಿ ಸರಹದ್ದಿನಲ್ಲಿರುವ ಶ್ರೀ ಟೋಪಿನ ದುರ್ಗಾದೇವಿ ಜಾತ್ರೆ ನಿಮಿತ್ತ ಮೂರು ದಿನಗಳ ರಾಜ್ಯ ಮಟ್ಟದ ಬಯಲು ಜಂಗೀ ಕುಸ್ತಿಯ ಕೊನೆಯ ದಿನ ಸೋಮವಾರದ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು.

ಸಂಜೆ ನಡೆದ ಅಂತಿಮ ಪಂದ್ಯದಲ್ಲಿ ದಾವಣಗೆರೆಯ ಪೈಲ್ವಾನ್ ಕರ್ನಾಟಕ ಕೇಸರಿ ಕಿರಣ ಅವರು ಮಹಾರಾಷ್ಟ್ರ ಕೇಸರಿ ಓಂಕಾರ ಬೂತಮಾರೆ ಅವರನ್ನು ಸೋಲಿಸುವ ಮೂಲಕ 25 ಸಾವಿರ ನಗದು ಮತ್ತು ಬಿಸನಳ್ಳಿಯ ದಿ. ಗುರುಸಿದ್ದಪ್ಪ ಅಂಗಡಿ ಅವರ ಸ್ಮರಣಾರ್ಥ ನೀಡಿದ ಬೆಳ್ಳಿ ಗದೆ ಪಡೆದುಕೊಂಡರು.

ಎರಡನೇಯ ಪಂದ್ಯದಲ್ಲಿ ಕಲಬುರಗಿ ಬೆಳಮಗಿಯ ಪೈಲ್ವಾನ್ ಸಿದ್ದಪ್ಪ ಪೂಜಾರ ಅವರು ದಾವಣಗೆರೆಯ ಪೈಲ್ವಾನ್ ಗಿರೀಶ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ ಮತ್ತು 12 ಸಾವಿರ ನಗದು ಬಹುಮಾನ ಪಡೆದರು. ವಿಜೇತ ಪೈಲ್ವಾನರಿಗೆ ಅರಳೆಲೆಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು, ಎಂ.ಎಂ. ಪಠಾಣ ಬಹುಮಾನ ವಿತರಣೆ ಮಾಡಿದರು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಅಧಿಕ ಪೈಲ್ವಾನರು ಗೆಲುವಿಗಾಗಿ ಸೆಣಸಾಡಿದರು. ಜಟ್ಟಿಗಳ ಸೆಣಸಾಟ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಜನರು ಚಕ್ಕಡಿ, ಟ್ರ್ಯಾಕ್ಟರ್​ನಲ್ಲಿ ಆಗಮಿಸಿದ್ದರು.

ಉಮೇಶ ಅಂಗಡಿ, ಗುಡ್ಡಪ್ಪ ಜಲದಿ, ಶಂಭುಲಿಂಗಪ್ಪ ಆಜೂರ, ಸೋಮನಗೌಡ್ರ ಪಾಟೀಲ, ನಿಂಗನಗೌಡ ಪಾಟೀಲ, ಹನುಮಂತಪ್ಪ ತಳ್ಳಳ್ಳಿ, ಸುರೇಶಪ್ಪ ಹಂಡೆ, ಎಫ್.ಸಿ. ಕಾಡಪ್ಪಗೌಡ್ರ, ಬಸನಗೌಡ ಪಾಟೀಲ, ಉಮೇಶ ಹಳವಳ್ಳಿ ಹಾಗೂ ಜಾತ್ರಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಿಪಿಐ ಸುರೇಶ ಕುಂಬಾರ ನೇತೃತ್ವದಲ್ಲಿ ಪಿಎಸ್​ಐಗಳಾದ ನಿಂಗಪ್ಪ ಕೆ.ವೈ., ಪರಶುರಾಮ ಕಟ್ಟಿಮನಿ, ಪರಶುರಾಮ ನಿರೋಳ್ಳಿ, ಡಿಳ್ಳೆಪ್ಪ ಕೂಡಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net