

ದಾವಣಗೆರೆ: ಪ್ರಾಕೃತಿಕ ಸಮಸ್ಯೆಗಳ ಜಾಗೃತಿಯೊಂದಿಗೆ ಪರಿಸರ ಉಳಿಸಿದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಪರಂಪರೆ ಕಟ್ಟಿಕೊಡಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಹೇಳಿದರು.
ಹೊರವಲಯದ ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಪೂರಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಬಹುದಾಗಿದೆ ಎಂದರು.
ಪರಿಸರ ಉಳಿವಿನ ಜಾಗತಿಕ ಸ್ಮರಣೆಗೆ ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. 1972ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಪರಿಸರದ ವ್ಯವಸ್ಥೆಗಳನ್ನು ಸಂರಕ್ಷಿಸುವುದು ಹಾಗೂ ಮರುಸ್ಥಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಹೆಚ್ಚುತ್ತಿರುವ ಪರಿಸರದ ಸವಾಲುಗಳನ್ನು ಎದುರಿಸುವ ದೃಷ್ಟಿಕೋನದಿಂದ ವಿಶ್ವ ಪರಿಸರ ದಿನಾಚರಣೆ ಅತಿ ಮುಖ್ಯವಾಗಿದೆ. ಪರಿಸರ ಸಂರಕ್ಷಣೆ ಜತೆಗೆ ಹವಾಮಾನ ಬದಲಾವಣೆ, ಅರಣ್ಯ ನಾಶ, ಜೀವ ವೈವಿಧ್ಯದ ನಷ್ಟ ಮತ್ತು ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವ ಅಧುನಿಕ ಬದುಕಿನ ಗೀಳಿಗೆ ಬಿದ್ದು, ಪರಿಸರ ನಾಶ ಮಾಡುತ್ತಿದ್ದಾನೆ. ಮಾನವನ ದುರಾಸೆಯಿಂದ ಗಾಳಿ, ನೀರು, ಮಣ್ಣು ಸೇರಿ ಪರಿಸರದ ಎಲ್ಲಾ ಅಂಶಗಳು ಕಲುಷಿತವಾಗಿವೆ. ಪ್ರತಿಯೊಬ್ಬರಲ್ಲೂ ಪ್ರಕೃತಿ ಕಾಳಜಿ ಅತ್ಯವಶ್ಯ ಎಂದರು.
ಶ್ರೀಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಹಸಿರು ಪಡೆ, ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಭಾಲಭವನ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾಸಂಸ್ಥೆಯ ನಿರ್ದೇಶಕಿ ಎ.ಎಚ್.ಸುಗ್ಗಲಾದೇವಿ, ಮುಖಂಡರಾದ ಎಂ.ಸಿದ್ದೇಶ್, ಎಂ.ಗುರುಸಿದ್ದಸ್ವಾಮಿ, ಎ.ಎಚ್.ಸಿದ್ದಲಿಂಗಸ್ವಾಮಿ, ಎಸ್.ಬಿ.ಶಿಲ್ಪಾ ಇತರರಿದ್ದರು. ಹತ್ತು ವಿದ್ಯಾರ್ಥಿಗಳನ್ನು ಒಂದು ವರ್ಷದ ಅವಧಿಗೆ ಪರಿಸರ ರಾಯಭಾರಿಗಳನ್ನಾಗಿ ನೇಮಿಸಿ ಬ್ಯಾಡ್ಜ್ ವಿತರಿಸಲಾಯಿತು.
---