ಕಾರ್ಯದಕ್ಷತೆ ಮೂಲಕ ಹಗರಣ ತಪ್ಪಿಸಿ

1001238720.jpg
Published on

ದಾವಣಗೆರೆ: ಬೆಂಗಳೂರಿನಲ್ಲಿ ದೊಡ್ಡ ಬ್ಯಾಂಕ್‌ಗಳು ಹಗರಣಗಳಲ್ಲಿ ಮುಳುಗುತ್ತಿವೆ. ಇಂತಹ ಅವ್ಯವಹಾರಗಳು ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಆಗದಂತೆ ಕಾರ್ಯದಕ್ಷತೆಯಿಂದ ಕೆಲಸ ನಿರ್ವಹಿಸಬೇಕಿದೆ ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕ ಡಾ.ಕೆ.ಮಹೇಶ್ವರಪ್ಪ ಕಿವಿಮಾತು ಹೇಳಿದರು.

ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್‌ಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧಿಕಾರಿ-ಸಿಬ್ಬಂದಿಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯದಕ್ಷತೆ, ನಾಯಕತ್ವ ಕೌಶಲ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಡಳಿತ ಮಂಡಳಿ ಹಾಗೂ ಅಧಿಕಾರಿ- ಸಿಬ್ಬಂದಿ ಇಬ್ಬರೂ ಕೂಡ ರಥದ ಎರಡು ಗಾಲಿಗಳು. ಬ್ಯಾಂಕ್‌ಗಳಲ್ಲಿ ನಾನಾ ರೀತಿಯ ಆಡಿಟ್‌ಗಳು ಬರಲಿವೆ. ಹೀಗಾಗಿ ಆಯಾ ದಿನದ ಓಚರ್, ರಸೀದಿಯನ್ನು ಆಡಳಿತ ಮಂಡಳಿ ಗಮನಕ್ಕೆ ತರುವ ದಿನಚರಿ ಬೆಳೆಸಿಕೊಂಡಲ್ಲಿ ಅವಾಂತರಗಳಿಗೆ ಅವಕಾಶ ಇರುವುದಿಲ್ಲ ಎಂದರು.

ಆರ್‌ಬಿಐ, ನಬಾರ್ಡ್ ಹಾಗೂ ಸರ್ಕಾರಗಳ ಸುತ್ತೋಲೆ, ನಿರ್ದೇಶನಗಳ ಕಡತಗಳನ್ನು ಕಾಲಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡಬೇಕು. ಅಧಿಕೃತ ಸುತ್ತೋಲೆಗಳನ್ನು ಅಗತ್ಯ ಕಾರ್ಯಕ್ಕೆ ತಕ್ಕಂತೆ ಬಳಸಬೇಕು. ಹೊಸ ಕಾನೂನು, ಸುತ್ತೋಲೆ ಪರಿಚಯವಿಲ್ಲ ಎಂಬ ಕಾರಣಕ್ಕೆ ತಪ್ಪೆಸಿದರೆ ಅದನ್ನು ಸಹಿಸಲಾಗದು ಎಂದು ಕಿವಿಮಾತು ಹೇಳಿದರು.

ಆರ್‌ಬಿಐ ಕಾನೂನುಗಳ ಮೂಲಕವಾಗಿ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಹೀಗಾಗಿ ಆರ್‌ಬಿಐ ಅಥವಾ ಮಾರ್ಗದರ್ಶಿ ರೂಪ ಹೊರತಾಗಿಸಿ ಅಧಿಕಾರಿ ಸಿಬ್ಬಂದಿ ಕೆಲಸ ಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ನಾಯಕತ್ವ ಕೌಶಲ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕ್ರೀಡಾಪಟು ಕ್ರೀಡಾ ಪ್ರವೇಶಕ್ಕೂ ಮುನ್ನ ಅಂಕಣದ ಗೆರೆಗೆ ನಮಸ್ಕರಿಸುವಂತೆ ಕಚೇರಿ, ಈ ಕ್ಷೇತ್ರಕ್ಕೆ ಬರುವವರಲ್ಲೂ ವಿನಮ್ರ ನಡೆ ಇರಬೇಕು. ಬ್ಯಾಂಕ್ ವಹಿಸಿದ ಸ್ಥಾನಮಾನದ ಋಣ ತೀರಿಸುವ ಬಗ್ಗೆ ಆಲೋಚಿಸಿ ನಡೆದರೆ ಬ್ಯಾಂಕ್ ಉನ್ನತ ಮಟ್ಟಕ್ಕೆ ತಲುಪಲಿದೆ. ದಿನವಹಿ ಕೆಲಸದಲ್ಲಿ ಆದ ತಪ್ಪು, ಪ್ರಭಾವ, ಪ್ರಗತಿ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಬೇಕು. ಆಗ ಬಂದ ಸವಾಲನ್ನು ಧೈರ್ಯದಿಂದ ಎದುರಿಸಬಹುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್. ರಾಮರೆಡ್ಡಿ ಮಾತನಾಡಿ ಸಹಕಾರ ಬ್ಯಾಂಕ್‌ಗಳು ಸಾಲ ನೀಡುವ ಜತೆಗೆ ಅದರ ವಸೂಲಾತಿಯಲ್ಲೂ ಜಾಗ್ರತೆ ವಹಿಸಬೇಕು. ಸಾಲ ಕೇಳಿ ಬರುವ ಗ್ರಾಹಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ, ಅವರ ದಾಖಲೆ ಪರಿಶೀಲಿಸಿ ಸಾಲ ವಿತರಿಸಬೇಕಿದೆ ಎಂದರು.

ಗ್ರಾಹಕರು ಕೂಡ ಪಡೆದ ಸಾಲವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದ ಅವರು, ಅಧಿಕಾರಿ ಸಿಬ್ಬಂದಿ ನಾಯಕತ್ವ ಕೌಶಲ ಹೊಂದಬೇಕು. ಸಿಬ್ಬಂದಿಗೆ ಬೇಕಿರುವ ತರಬೇತಿಯನ್ನು ಕೊಡಿಸಲು ಮಹಾಮಂಡಳ ಸಿದ್ಧವಿದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ ಅಧಿಕಾರಿಗಳಲ್ಲಿ ಎಷ್ಟೇ ಬುದ್ಧಿವಂತಿಕೆ ಇದ್ದರೂ ಆರ್‌ಬಿಐ ನಿಯಾಮವಳಿ ಬದಲಾವಣೆ ಪರಿಚಯ ಹೊಂದಿರಬೇಕಾದ್ದು ಅತ್ಯವಶ್ಯ ಎಂದು ಹೇಳಿದರು.

ಬೆಂಗಳೂರಿನ ಕಾರ್ಪೋರೇಟ್ ತರಬೇತುದಾರ ಡಾ. ನಂದೀಶ್ ವಿ. ಹಿರೇಮಠ ಮಾತನಾಡಿ ಬ್ಯಾಂಕ್ ಅಧಿಕಾರಿ- ಸಿಬ್ಬಂದಿಯಲ್ಲಿ ಉತ್ತಮ ಮನೋಭಾವ, ನಂಬಿಕೆ, ಬದ್ಧತೆ, ಶಿಸ್ತು ಮೊದಲಾದ ಗುಣಗಳನ್ನು ಹೊಂದಿದಲ್ಲಿ ಶ್ರೇಷ್ಠತೆ ಗಳಿಸಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆರ್‌ಬಿಐ ನಿವೃತ್ತ ವ್ಯವಸ್ಥಾಪಕ ಕೆ.ಎಸ್. ಜೀವನ್‌ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಿ. ಗೋಪಾಲ್, ಕೆ.ಎಚ್. ಷಣ್ಮುಖಪ್ಪ, ಮಂಜುಳಾ ಗಣೇಶಪ್ಪ, ಕೆ.ಜಿ. ಸುರೇಶ್, ಎಚ್.ಆರ್. ಸಿದ್ದೇಶ್, ಎಸ್. ದೀಪಕ್ ಪಟೇಲ್, ಎಂ.ಜಿ. ಷಣ್ಮುಖಪ್ಪ, ನಿರ್ಮಲಾ ಸುಭಾಷ್, ಆರ್. ಶ್ರೀನಿವಾಸ, ಟಿ.ಎಂ. ಪಾಲಾಕ್ಷಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net