

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿರುವ ಬಿಜೆಪಿ, ಪ್ರಾಸಿಕ್ಯೂಷನ್ ಹೆಸರಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಹುನ್ನಾರ ನಡೆಸಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಆರೋಪಿಸಿದರು.
ನಗರದ ವಿಜಯನಗರ ಬಡಾವಣೆಯಲ್ಲಿ (ಆರನೇ ವಾರ್ಡ್) ದಾವಣಗೆರೆ ನಗರ ಪಾಲಿಕೆಯ 15ನೇ ಹಣಕಾಸು ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಿದ್ದರಾಮಯ್ಯ ಅವರ ಜನಪರ ಆಡಳಿತ ಸಹಿಸಲಾಗದ ಬಿಜೆಪಿ, ಮುಡಾ ಪ್ರಕರಣದಲ್ಲಿ ಭಾಗಿಯಾಗದ ಸಿಎಂ ಬಗ್ಗೆ ವಿನಾಕಾರಣ ಭ್ರಷ್ಟಾಚಾರದ ಆರೋಪ ಹೊರೆಸುತ್ತಿದೆ. ಸರ್ಕಾರ ಅಸ್ಥಿರಗೊಳಿಸಲು ಹೊರಟಿದೆ ಎಂದರು.
ಸಿದ್ದರಾಮಯ್ಯನವರ ಪರ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಶಾಸಕರು ಇದ್ದಾರೆ. ಕರ್ನಾಟಕ ರಾಜ್ಯದ ಜನರ ಆಶೀರ್ವಾದ ಇದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಬಿಜೆಪಿ-ಜೆಡಿಎಸ್ ನಾಯಕರು ವಿರೋಧಿಸಿದರು. ರಾಜಭವನ ದುರ್ಬಳಕೆ ಮಾಡಿಕೊಂಡು ಅವರ ವಿರುದ್ಧ ಸುಳ್ಳು ಅರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಎಲ್.ಡಿ.ಗೋಣೆಪ್ಪ ಮಾತನಾಡಿ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗೂ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರ ಜನಪರ ಕಾಳಜಿಯನ್ನು ಮೆಚ್ಚಿ ಕಾಂಗ್ರೆಸ್‌ಗೆ ಬೆಂಬಲಿಸುತ್ತಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ವಿನಾಯಕ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಸದಸ್ಯರಾದ ಎ.ನಾಗರಾಜ್, ಎ.ಬಿ.ರಹೀಂಸಾಬ್, ಆಯುಕ್ತೆ ರೇಣುಕಾ, ಮುಖಂಡರಾದ ಎಲ್.ಜಿ.ಬಸವರಾಜ್, ಇಟ್ಟಿಗುಡಿ ಮಂಜುನಾಥ್, ಜಗದೀಶ್, ಗೀತಾ ಚಂದ್ರಶೇಖರ್, ಎಲ್.ಜಿ.ಪರಶುರಾಂ, ರುದ್ರಪ್ಪ, ಹನುಮಂತಪ್ಪ ಇತರರಿದ್ದರು.