

ದಾವಣಗೆರೆ: ಮಹಿಳೆಯರು ಪ್ರಧಾನಿ, ರಾಷ್ಟ್ರಪತಿ ಮೊದಲಾದ ಉನ್ನತ ಸ್ಥಾನ ಪಡೆದರೂ ದೇಶದಲ್ಲಿ ನಾರಿಯರ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ವಿಷಾದಿಸಿದರು.
ಸ್ಲಂ ಜನಾಂದೋಲನಾ ಕರ್ನಾಟಕ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯಿಂದ ರೋಟರಿ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯುವ ಮತ್ತು ಮಹಿಳಾ ನಾಯಕತ್ವ ಶಿಬಿರ, ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅನೇಕ ಅವಕಾಶಗಳಿಂದ ತಾಯಂದಿರು ವಂಚಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣ ಮತ್ತು ಅವರ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ. ಧರ್ಮ, ಜಾತಿ, ವರ್ಗ, ಲಿಂಗಭೇದ ಮೀರಿ ವಿಶಾಲ ತಳಹದಿಯ ಮೇಲೆ ಮಹಿಳಾ ನಾಯಕತ್ವದಡಿ ದೇಶ ಕಟ್ಟುವ ಅಗತ್ಯವಿದೆ ಎಂದು ಹೇಳಿದರು.
75 ವರ್ಷಗಳಿಂದಲೂ ಪುರುಷರಿಗೆ ಸಮಾನವಾದ ಕೆಲಸಗಳನ್ನು ಮಾಡುತ್ತಾ ಬಂದಿರುವ ಮಹಿಳೆಯರು ಇಂದಿಗೂ ದಬ್ಬಾಳಿಕೆ ದೌರ್ಜನ್ಯ ಎದುರಿಸಬೇಕಾಗಿದೆ. ರಾಜಕೀಯದಲ್ಲಿ ಹೆಣ್ಣುಮಕ್ಕಳನ್ನು ಬದಿಗಿಟ್ಟು ಪುರುಷ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತಿರುವುದು ಸರಿಯಲ್ಲ ಎಂದರು.
ಭಾರತೀಯ ಸಂವಿಧಾನವು ಮಹಿಳೆಯರಿಗೆ ಸಮಾನತೆ, ಸಮಾನ ಅವಕಾಶ ಮತ್ತು ಸವಲತ್ತುಗಳನ್ನು ಹೊಂದುವ ಅವಕಾಶ ಕಲ್ಪಿಸಿದೆ. ಸ್ಥಳೀಯ ಚಳವಳಿಗಳ ಮುಖಾಂತರ ನಾಯಕಿಯರಾಗಿರುವ ಮಹಿಳೆಯರು ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಹೇಳಿದರು.
ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ, ಸ್ವಯಂ ನಿರ್ಧಾರ ಕೈಗೊಳ್ಳುವಂತಹ ಅವಕಾಶ ಮಾಡಿಕೊಡಬೇಕಿದೆ. ನಾರಿಯರು ಸಮಾಜದ ಎಲ್ಲಾ ಸಮುದಾಯಗಳಲ್ಲಿ ಭಾಗವಹಿಸುವ ವಾತಾವರಣ ಕಲ್ಪಿಸಬೇಕಾದ್ದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸ್ಲಂ ಜನಾಂದೋಲನ ಸಮಿತಿ ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಪ್ರತಿಯೊಬ್ಬರಿಗೂ ಸಂವಿಧಾನದ ಮೂಲ ಆಶಯಗಳನ್ನು ತಿಳಿಸಬೇಕಿದೆ. ಸಂವಿಧಾನ ಮಾಡಬೇಕಾದ ಕೆಲಸಗಳನ್ನು ಬೇರೆ ಬೇರೆ ಹಿತಾಸಕ್ತಿಗಳು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಮಾತನಾಡಿ, ಕಾರ್ಮಿಕರ ಪರವಾದ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಾಲ ಕಾಲಕ್ಕೆ ಸರಿಯಾಗಿ ಸಂಘಟಿತ ವಲಯದಲ್ಲಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಇದೇ ವೇಳೆ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆ ಓದಿಸಲಾಯಿತು.
ಸಂಘಟನೆಯ ಗೌರವಾಧ್ಯಕ್ಷ ಎಸ್.ಎಲ್.ಆನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಪದಾಧಿಕಾರಿ ರಂಗಮ್ಮ, ಸ್ಲಂ ಜನಾಂದೋಲನಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಅಧ್ಯಕ್ಷ ಎಂ. ಶಬ್ಬೀರ್‌ಸಾಬ್, ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷೆ ಮಂಜುಳಾ, ಜಂಷಿದಾ ಬಾನು, ಬಾಲಪ್ಪ, ರೇಷ್ಮಾ, ರೇಖಾ, ಅಸ್ಮಾ, ರಾಜೇಶ್ವರಿ, ಬೀಬಿ ಜಾನ್, ಗೀತಮ್ಮ, ಚಮನ್, ಸಲಾಂ ಸಾಬ್, ಆರಿಫ್, ಪರ್ವಿನ್ ಬಾನು ಇತರರಿದ್ದರು.