ಕಿತ್ತೂರು ಚನ್ನಮ್ಮ ವಿಜಯ ಜ್ಯೋತಿಯಾತ್ರೆಗೆ ಸ್ವಾಗತ

1000433058.jpg
Published on

ದಾವಣಗೆರೆ: ಬ್ರಿಟಿಷರ ವಿರುದ್ಧ, ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ವಿಜಯ ಸಾಧಿಸಿದ 200 ವರ್ಷಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಬೆಂಗಳೂರಿನಿಂದ ರಾಜ್ಯವ್ಯಾಪಿ ಆರಂಭಿಸಿರುವ ವಿಜಯ ಜ್ಯೋತಿ ಯಾತ್ರೆ ಬುಧವಾರ ಚಿತ್ರದುರ್ಗ ಮೂಲಕ ದಾವಣಗೆರೆ ಜಿಲ್ಲೆ ಪ್ರವೇಶಿಸಿತು.
ಅಶ್ವರೂಢ ಚನ್ನಮ್ಮನ ಪ್ರತಿಮೆ ಸಹಿತ ಜೀಪ್‌ನಲ್ಲಿ ಅಲಂಕೃತ ಜ್ಯೋತಿ ಯಾತ್ರೆ, ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿದಾಗ ಜಿಲ್ಲಾಡಳಿತ, ಹಾಗೂ ಸಮಾಜದ ಮುಖಂಡರು ಸ್ವಾಗತಿಸಿದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾಲಾರ್ಪಣೆ ಮಾಡಿ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್ ಮತ್ತಿತರರು ಮಾತನಾಡಿ ಬ್ರಿಟಿಷರ ವಿರುದ್ಧದ ಕಿತ್ತೂರು ಚನ್ನಮ್ಮನ ದಿಟ್ಟ ಹೋರಾಟ ಇತಿಹಾಸದಲ್ಲಿ ಛಾಪು ಮೂಡಿಸಿದೆ. ಚನ್ನಮ್ಮ ರಾಷ್ಟ್ರದ ಹೆಮ್ಮೆ ಎಂದು ಹೊಗಳಿದರು.
ಪಂಚಮಸಾಲಿ ಸಮಾಜದ ಮುಖಂಡ, ಜವಳಿ ಉದ್ಯಮಿ ಬಿ.ಸಿ.ಉಮಾಪತಿ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜದ ಪ್ರಮುಖರಾದ ಕಂಚಿಕೆರೆ ಕೊಟ್ರೇಶ್, ಬಾದಾಮಿ ಜಯಣ್ಣ, ಅಶೋಕ್ ಗೋಪನಾಳ್, ಅಭಿ ಕಾಟನ್ ಬಕ್ಕೇಶ್, ನ್ಯಾಯವಾದಿ ಸುಷ್ಮಾ ಪಾಟೀಲ್, ಗೀತಾ ಪ್ರಶಾಂತ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರಿದ್ದರು.
ನಾಸಿಕ್ ಡೋಲಿನ ಸದ್ದಿನೊಂದಿಗೆ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಯಾತ್ರೆ ಸಾಗಿತು. ಅಲ್ಲಿಂದ ಹರಿಹರ ಮೂಲಕವಾಗಿ ಹಾವೇರಿ ಜಿಲ್ಲೆಯತ್ತ ಪಯಣ ಬೆಳೆಸಿತು. ಯಾತ್ರೆಯು ಅ.23ರಂದು ಕಿತ್ತೂರು ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net