ವೋಟ್ ಚೋರಿ ಅಭಿಯಾನ ದರೋಡೆಕೋರರ ನೀತಿಪಾಠ

1001225493.jpg
Published on

ದಾವಣಗೆರೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ವೋಟ್ ಚೋರಿ ವಿರೋಧಿ ಅಭಿಯಾನವು ದರೋಡೆಕೋರರು ಹೇಳಿದ ನೀತಿಪಾಠದಂತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಲೇವಡಿ ಮಾಡಿದರು.

ರಾಷ್ಟ್ರೀಯ ಹಂತದಿಂದ ಜಿಲ್ಲಾ ಮಟ್ಟದವರೆಗೆ ಅಕ್ರಮ ಕೃತ್ಯಗಳ ಮೂಲಕವೇ ಅಧಿಕಾರ ನಡೆಸಿದವರೇ ಕಾಂಗ್ರೆಸಿಗರು. ಅವರೇ ದೇಶದ ಪ್ರಧಾನಿಯನ್ನು ಟೀಕಿಸುತ್ತಿರುವುದು ಅರ್ಥಹೀನ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

1971ರ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಸ್ಫರ್ಧಿಸಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಸೋಲುಂಡಿದ್ದ ರಾಜನಾರಾಯಣ್, ಅಲಹಾಬಾದ್ ಹೈಕೋರ್ಟ್‌ನಲ್ಲಿ ಭ್ರಷ್ಟಾಚಾರದ ಪ್ರಕರಣ ದಾಖಲಿಸಿದ್ದರು.

ಸರ್ಕಾರಿ ವಾಹನ ದುರ್ಬಳಕೆ, ಅಧಿಕಾರಿಗಳಿಂದ ಸಂಪನ್ಮೂಲ ಕ್ರೋಡೀಕರಣ, ಮತದಾರರಿಗೆ ಹಣ-ಮದ್ಯ ಹಂಚಿಕೆ, ಕಂಬಳಿ ವಿತರಣೆ, ಮಿತಿ ಮೀರಿದ ಚುನಾವಣಾ ವೆಚ್ಚ ಕುರಿತಂತೆ ದಾಖಲೆ ಸಹಿತ ದೃಢಪಡಿಸಿದಾಗ ಪರಿಶೀಲಿಸಿದ ಕೋರ್ಟ್, ಇಂದಿರಾಗಾಂಧಿ ತಪ್ಪಿತಸ್ಥರು ಎಂದು ತೀರ್ಮಾನಿಸಿ ಲೋಕಸಭಾ ಸದಸ್ಯತ್ವದಿಂದ ವಜಾ ಮಾಡಿತ್ತು. ಇದು ಕಾಂಗ್ರೆಸ್ಸಿನ ಇತಿಹಾಸ ಎಂದು ಟೀಕಿಸಿದರು.

1998ರಲ್ಲಿನ ದಾವಣಗೆರೆ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸಿಗರೇ ಗೆಲ್ಲುವ ಕುತಂತ್ರದಿಂದ ಬಿಜೆಪಿ ನಗರಸಭಾ ಸದಸ್ಯ ಎಲ್.ಬಸವರಾಜ್ ಅವರನ್ನು ಅಪಹರಿಸಿ, ಜೈಲು ಶಿಕ್ಷೆ ಅನುಭವಿಸಿದ ನಿದರ್ಶನವಿದೆ ಎಂದು ದಿನೇಶ್ ಕೆ.ಶೆಟ್ಟಿಗೆ ಟಾಂಗ್ ನೀಡಿದರು.

ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದ ಮಹಾನ್ ನಾಯಕರನ್ನು ಜೈಲಿಗೆ ಹಾಕಿ ಅಧಿಕಾರ ನಡೆಸಿದವರು ಕಾಂಗ್ರೆಸ್‌ನ ಅಧಿನಾಯಕಿ ಇಂದಿರಾಗಾಂಧಿ. ಈಗ ಸಂವಿಧಾನದ ಬಗ್ಗೆ ಮಾತನಾಡುವ ಅವರ ಮೊಮ್ಮಗ ರಾಹುಲ್ ಗಾಂಧಿ ಮತ್ತು ಕಾಂಗ್ರೆಸಿಗರು ವೋಟ್ ಚೋರಿ ಅಭಿಯಾನ ನಡೆಸುತ್ತಿರುವುದು ದೇಶದ ದುರಂತ ಎಂದು ಟೀಕಿಸಿದರು.

ಹಿಂದಿನ ಚುನಾವಣೆಗಳಲ್ಲಿ ಗೆಲ್ಲಲು ಮಾಡಿದ ಅಕ್ರಮಗಳ ಬಗ್ಗೆ ದೇಶ ಮತ್ತು ದಾವಣಗೆರೆ ಜನರ ಬಳಿ ಕಾಂಗ್ರೆಸಿಗರು ಮೊದಲು ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ. ತದನಂತರವೇ ಪ್ರಧಾನಿ ಬಗ್ಗೆ ಟೀಕೆ ಮಾಡಲಿ ಎಂದು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಅಣಬೇರು ಜೀವನಮೂರ್ತಿ, ರಮೇಶ್‌ನಾಯ್ಕ, ರಾಜು ನೀಲಗುಂದ, ಟಿಂಕರ್ ಮಂಜಣ್ಣ ಇತರರಿದ್ದರು.

---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net