

ದಾವಣಗೆರೆ: ವಿಶ್ವಕರ್ಮ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಶಾಸನ ಸಭೆಗಳಲ್ಲಿ ಕೂರುವ ಭಾಗ್ಯ ಸಿಗುತ್ತಿಲ್ಲ. ಕುರ್ಚಿಗಳನ್ನು ತಯಾರಿಸುವ ನಮಗೇ ಅಧಿಕಾರದ ಕುರ್ಚಿ ಸಿಗುತ್ತಿಲ್ಲ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್‌ನ ಗೌರವಾಧ್ಯಕ್ಷ, ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್‌ಸಿಂಗ್ ಅವರ ಮೊಮ್ಮಗ ಇಂದ್ರಜಿತ್ ಜೇಲ್‌ಸಿಂಗ್ ವಿಷಾದ ವ್ಯಕ್ತಪಡಿಸಿದರು.
ನಗರದ ಅಭಿನವ ರೇಣುಕ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಅಖಿಲ ಭಾರತ ವಿಶ್ವಕರ್ಮ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಶಿಲೆಗಳು ಪೂಜಿಸಲ್ಪಡುತ್ತವೆ. ಕಲ್ಲನ್ನು ಕಟೆದು ಶಿಲ್ಪ ಮಾಡುವವರು ವಿಶ್ವಕರ್ಮರು. ನಾವು ಮೂರ್ತಿ ಮಾಡದೇ ಹೋದಲ್ಲಿ ಭಾರತದಲ್ಲಿ ಪೂಜೆ ನಡೆಯುವುದಿಲ್ಲ. ನಾವು ಲೋಹಗಳನ್ನು ಹಾಗೂ ಮರದ ತುಂಡುಗಳನ್ನು ಸುತ್ತಿಗೆ ಇಲ್ಲದಲೇ ಪರಸ್ಪರ ಕೂಡಿಸುವ ನಮ್ಮಲ್ಲೇ ಒಗ್ಗಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ನಿರ್ಮಿಸುವ ಕುರ್ಚಿಗಳಲ್ಲಿ ಬೇರೆಯವರು ಅಧಿಕಾರ ನಡೆಸುವ ಸ್ಥಿತಿ ಇದೆ. ಸ್ವಾಮೀಜಿಗಳು ಸಮಾಜದವರಿಗೆ ಒಗ್ಗಟ್ಟಿನ ಆಶೀರ್ವಾದ ಮಾಡಬೇಕಿದೆ. ನಮ್ಮಲ್ಲಿ ಒಗ್ಗಟ್ಟು ಮೂಡಿದಾಗ ನಮ್ಮ ಹಕ್ಕು ಕೇಳಲು ಸಾಧ್ಯ. 18 ಪಂಗಡಗಳಲ್ಲಿ ಗುರುತಿಸಿಕೊಂಡ ವಿಶ್ವಕರ್ಮರು ಬಲಪ್ರದರ್ಶನ ಮಾಡಿದಾಗ ಶಾಸಕ, ಸಂಸದರ ಸ್ಥಾನ ಪಡೆಯಬಹುದು ಎಂದು ಹೇಳಿದರು.
ಕರವೇ ಅಧ್ಯಕ್ಷ ಪ್ರವೀಣ್‌ಶೆಟ್ಟಿ ಮಾತನಾಡಿ ಟೀಕೆಗಳಿಗೂ ಮೀರಿ ವಿಶ್ವಕರ್ಮ ಪರಿಷತ್ ಕೆಲಸ ಮಾಡುತ್ತಿದ್ದು ಇದರ ಜತೆ ನಾವಿದ್ದೇವೆ. ರೈತರು ನಮಗೆ ಅನ್ನ ನೀಡಿದರೆ ಅನ್ನದಾತರಿಗೆ ನೇಗಿಲು ಕೊಟ್ಟವರು ವಿಶ್ವಕರ್ಮರು. ಅವರಿಲ್ಲದೆ ಶುಭ ಕಾರ್ಯಗಳು ನಡೆಯವು ಎಂದು ಹೇಳಿದರು
ಸರ್ಕಾರಕ್ಕೂ ಪೂರ್ವದಲ್ಲೇ ಮಠಗಳು ಕನ್ನಡ ಉಳಿವಿಗಾಗಿ ಕೆಲಸ ಮಾಡಿವೆ. ಸ್ವಾಮೀಜಿಗಳಿಲ್ಲದೆ ಹೋಗಿದ್ದರೆ ಕನ್ನಡ ಮತ್ತು ಕನ್ನಡಿಗರು ಉಳಿಯಲು ಸಾಧ್ಯವಿರಲಿಲ್ಲ. ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಸುವ ಮೂಲಕ ಕನ್ನಡವನ್ನು ಕಟ್ಟಬೇಕಿದೆ ಎಂದರು.
ಕನ್ನಡಪರ ಹೋರಟಗಾರರಾದ ನಾವು ಕನ್ನಡ, ಕನ್ನಡಿಗರ ಉದ್ಯೋಗ, ಜಲ ಹಾಗೂ ಗಡಿ ವಿವಾದಗಳ ಸಂದರ್ಭದಲ್ಲಿ ಸರ್ಕಾೃದ ಜತೆ ಜಟಾಪಟಿ ಮಾಡುತ್ತೇವೆ. ಸೆರೆವಾಸ. ಲಾಠಿಯೇಟು ತಿನ್ನುತ್ತೇವೆ. ಜನರ ಪ್ರೀತಿ ನಮ್ಮನ್ನು ಇನ್ನಷ್ಟು ಕೆಲಸ ಮಾಡಲು ಉತ್ಸಾಹ ತುಂಬಿವೆ ಎಂದು ತಿಳಿಸಿದರು.
ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ವಿಭೂಷಿತ ಶಿವ ಸುಜ್ಞಾನತೀರ್ಥ ಸ್ವಾಮೀಜಿ, ವಡ್ನಾಳ್‌ನ ವಿಶ್ವ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಶ್ರೀ ಆನಂದ ಸಿದ್ಧಿಪೀಠದ ಸಂಸ್ಥಾಪಕ ಶ್ರೀ ಆನಂದ ಗುರೂಜಿ, ಶ್ರೀನಿವಾಸ ಶರ್ಮ, ಅಕ್ಕಮಹಾದೇವಿ, ಅಖಿಲ ಭಾರತ ವಿಶ್ವಕರ್ಮ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಎಚ್.ವಿ. ಸತೀಶ್‌ಕುಮಾರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್, ಉಪಾಧ್ಯಕ್ಷ ಕೆ. ಕಾಳಾಚಾರ್, ಪರಿಷತ್‌ನ ರಾಜ್ಯಾಧ್ಯಕ್ಷ ಎಸ್. ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಕೆ. ಸೋಮಶೇಖರ್ ಆಚಾರ್ ಇತರರಿದ್ದರು.
ಚನ್ನೇಶ ಬಡಿಗೇರ್, ಸೈಯದ್ ಪಾಷಾ, ಆರ್. ಅಬ್ದುಲ್, ಟಿ.ಎಲ್.ತಾರಾನಾಥ್, ಬಸವರಾಜ ದೊಡ್ಮನಿ, ಜೈಮುನಿ, ಸಿಕಂದರ್, ಶಿವಕುಮಾರ್ ಇತರ ಸಾಧಕರನ್ನು ಗೌರವಿಸಲಾಯಿತು. ಅಖಿಲ ಭಾರತ ವಿಶ್ವಕರ್ಮ ಪರಿಷತ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
--