ಮೂವತ್ತು ವರ್ಷ ಕ್ಷೇತ್ರ ಬಿಟ್ಟು ಕದಲೋದಿಲ್ಲ  ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವೆ ಪಕ್ಷೇತರ ಅಭ್ಯರ್ಥಿ ವಿನಯ್‌ಕುಮಾರ್ ಸ್ಪಷ್ಟನೆ

1000127363.jpg
Published on

ದಾವಣಗೆರೆ: ಚುನಾವಣೆ ಬಳಿಕ ನಾನು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಣಿಸುವುದಿಲ್ಲ ಎಂಬುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇನ್ನು 30 ವರ್ಷ ಈ ಕ್ಷೇತ್ರ ಬಿಟ್ಟು ಕದಲುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದ ಹೊರವಲಯರ ಶ್ಯಾಮ್‌ಸುಂದರ್‌ಶೆಟ್ಟಿ ಬಂಟರ ಸಮುದಾಯ ಭವನದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರಿಗೆ ಶನಿವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.
ಇಂದಿನಿಂದ ರಾಜಕೀಯ ಪರ್ವ ಹಾಗೂ ಧರ್ಮ ಸಂಸ್ಥಾಪನಾ ಕಾರ್ಯ ಶುರುವಾಗಿದೆ. ಈ ಚುನಾವಣೆಯಲ್ಲಿ ನನಗೆ 2ರಿಂದ 3 ಲಕ್ಷ ಮತಗಳು ಬರಬಹುದು. ಇದು ತಮಾಷೆಯ ಮಾತಲ್ಲ. ನಾನು ಸೋತಿಲ್ಲ. ಮಾನಸಿಕ ಹಾಗೂ ನೈತಿಕವಾಗಿ ಗೆದ್ದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸಿಗರ ದುರಂಹಕಾರ ಕಡಿಮೆಯಾಗಿದೆ. ಎಸ್‌ಎಸ್ ಮಲ್ಲಿಕಾರ್ಜುನ್, ಜಿ.ಎಂ.ಸಿದ್ದೇಶ್ವರ ಹಾಗೂ ಎರಡೂ ಪಕ್ಷದ ಅಭ್ಯರ್ಥಿಗಳ ವಿರುದ್ಧ ನನ್ನ ವೈಯಕ್ತಿಕ ದ್ವೇಷವಿಲ್ಲ. ಮುಂದೊಂದು ದಿನ ಅವರೆಲ್ಲ ನನ್ನ ಜತೆ ಬರುವ ಭರವಸೆ ಇದೆ. ಇಂದು ಚಿಕ್ಕ ತೊರೆ ಹರಿಯುತ್ತಿದೆ,  ಮುಂದೆ ದೊಡ್ಡ ನದಿಯಾಗಿ ಹರಿಯಲಿದೆ ಎಂದು ಹೇಳಿದರು.
ಜೂನ್ 1ರಿಂದ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ, ಸಾಮಾಜಿಕ ಕಳಕಳಿ ಬೆಳೆಸುತ್ತೇನೆ. ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಉತ್ತೇಜಿಸುತ್ತೇನೆ. ದಲಿತರ ಮಕ್ಕಳು ಅಧಿಕಾರಿಗಳಾಗುವಂತೆ ಪ್ರೇರಣೆ ತುಂಬಲಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ದಾವಣಗೆರೆಯಲ್ಲಿ ಸುಸಜ್ಜಿತ ಐಎಎಸ್ ತರಬೇತಿ ಸಂಸ್ಥೆ ನಿರ್ಮಿಸುತ್ತೇನೆ ಎಂದು ಹೇಳಿದರು.
ಮುಂಬರುವ ದಿನದಲ್ಲಿ ಗ್ರಾಮ ಪಂಚಾಯ್ತಿಯಿಂದ ಲೋಕಸಭೆ ಚುನಾವಣೆಗಳನ್ನು ಒಳ್ಳೆಯತನ, ವಿನಯತೆ ಹಾಗೂ ಸ್ವಾಭಿಮಾನದಿಂದ ಎದುರಿಸೋಣ. ಹಣ, ದ್ವೇಷರಹಿತ ಹಾಗೂ ಅಭಿವೃದ್ಧಿ ರಾಜಕಾರಣ ಮಾಡೋಣ. ಇದು ಬೇರೆ ಕ್ಷೇತ್ರಗಳಿಗೂ ಮಾದರಿಯಾಗಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ‘ನನ್ನ ತತ್ವ ಪ್ರಜಾಪ್ರಭುತ್ವ’ ಎಂಬ ಘೋಷಣೆ ಬಳಸಿದ್ದಾರೆ. ಆದರೆ 10 ತಿಂಗಳಲ್ಲಿ ಕೇತ್ರ ಸಂಚಾರ ಮಾಡಿದ ನನ್ನ ಹೆಸರು ನವದೆಹಲಿ ಮಟ್ಟದಲ್ಲಿ ಪಕ್ಷದ ಕಾಂಗ್ರೆಸ್ ವಲಯದ ಪಟ್ಟಿಯಲ್ಲಿತ್ತು. ಆದರೆ ಸಚಿವ ಮಲ್ಲಿಕಾರ್ಜುನ್ ಆತ್ಮಸಾಕ್ಷಿ ಮರೆತು ನನಗೆ ಟಿಕೆಟ್ ತಪ್ಪಿಸಿದರು. ಆತ್ಮಸಾಕ್ಷಿಯಿಲ್ಲದೆ ಸಿಎಂ ಹಾಗೂ ಸಚಿವರೂ ಇಲ್ಲಿ ಪ್ರಚಾರ ಮಾಡಿದರು.
ಎರಡೂ ಪಕ್ಷದವರಿಗೆ ದಾವಣಗೆರೆ ಅಭಿವೃದ್ಧಿ ಬೇಕಿಲ್ಲ. ಇಲ್ಲಿನ ಯುವಕರಿಗೆ ಉದ್ಯೋಗ ಕಲ್ಪಿಸುವ ಕನಿಷ್ಠ ಕಾಳಜಿಯೂ ಅವರಲ್ಲಿಲ್ಲ. ಭೈರನಪಾದ, ಏತ ನೀರಾವರಿ ಯೋಜನೆ ಸಾಕಾರದ ಭರವಸೆಯನ್ನು ಜನರು ಹೇಗೆ ನಂಬುತ್ತಾರೆ ಎಂದು ಪ್ರಶ್ನಿಸಿದರು.
ದಾವಣಗೆರೆ ಸೇರಿ ರಾಜ್ಯದ 28 ಕ್ಷೇತ್ರದಲ್ಲೂ ಹಣದ ಹೊಳೆ ಹರಿದಿದೆ. ನಾನು ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಹರಿಹರ, ಹೊನ್ನಾಳಿ, ದಾವಣಗೆರೆ ದಕ್ಷಿಣ ಹಾಗೂ ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವಂತೆ ಕೂಗು ಕೇಳಿಬರುತ್ತಿದೆ. ಅಭಿಮಾನಿಗಳ ಅಭಿಪ್ರಾಯ ಪಡೆದೇ ಮುಂದುವರಿಯುತ್ತೇನೆ ಎಂದು ಪ್ರಕಟಿಸಿದರು.
ಮುಖಂಡ ರಾಜು ಮೌರ್ಯ ಮಾತನಾಡಿ ವಿನಯ್‌ಕುಮಾರ್ ಅವರಿಗೆ ಒಂದು ಮತ ಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಹೋದರು. ಮುಖ್ಯಮಂತ್ರಿ ನಿದ್ದೆಗೆಡಿಸಿದ ವಿನಯ್ ಯಾರೆಂಬುದು ಈಗ ರಾಜ್ಯಕ್ಕೆ ಪರಿಚಯವಾಗಿದೆ ಎಂದರು.
ಹೇಮಣ್ಣ, ಯಲ್ಲಪ್ಪ, ಮೆಹಬೂಬಾ, ಎಸ್.ಎಂ. ಸಿದ್ದಲಿಂಗಪ್ಪ, ಎಚ್.ಪಿ.ಬಸವರಾಜ್ ಲಕ್ಕುಂಡಿ ಜಯಪ್ಪ, ವಾಸಣ್ಣ ಮೊದಲಾದವರು ಮಾತನಾಡಿ ವಿನಯ್‌ಕುಮಾರ್ ಹೋರಾಟ ಇಲ್ಲಿಗೆ ನಿಲ್ಲಬಾರದು. ಅವರಿಗೆ ಸದಾ ಬೆಂಬಲ ನೀಡಲಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net