

ದಾವಣಗೆರೆ: ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದ ಸಂತೆ ಮೈದಾನದ ನೂರಾರು ಅಡಿ ಜಾಗವನ್ನು ಗ್ರಾಪಂ ಅಧ್ಯಕ್ಷರ ಪುತ್ರ ತಮ್ಮ ಹೆಸರಿಗೆ ಇ-ಸ್ವತ್ತು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ದಿದ್ದಿಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಹುಚ್ಚಂಗಿಪುರದಿಂದ ಬೆಳಗ್ಗೆ ಪಂಚಾಯಿತಿಗೆ ಆಗಮಿಸಿದ ಗ್ರಾಮಸ್ಥರು ಅಧಿಕಾರಿ, ಸಿಬ್ಬಂದಿಯನ್ನು ಹೊರಗೆ ಕಳಿಸಿ ಬೀಗ ಹಾಕಿ ಘೋಷಣೆ ಕೂಗಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಹುಚ್ಚಂಗಿಪುರ ದೊಡ್ಡ ಗ್ರಾಮವಾಗಿದ್ದು, 7 ಮಂದಿ ಸದಸ್ಯರನ್ನು ಹೊಂದಿದೆ. ಯಾವುದೇ ಅಭಿವೃದ್ಧಿ ಕೆಲಸ ನಡೆದರೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆದರೆ, ಅಧ್ಯಕ್ಷೆ ಗುತ್ಯಮ್ಮ ಅವರ ಪುತ್ರ ರೇವಣಸಿದ್ದಪ್ಪ ಯಾರ ಗಮನಕ್ಕೂ ಇಲ್ಲದೇ ಸಾರ್ವಜನಿಕರಿಗಾಗಿ ಮೀಸಲಿಟ್ಟ ಸಂತೆ ಮೈದಾನದಲ್ಲಿ 100*80 ಅಡಿ ವಿಸ್ತೀರ್ಣದ ಜಾಗವನ್ನು ತನ್ನ ಹೆಸರಿಗೆ ಇ-ಸ್ವತ್ತು ಮತ್ತು ಖಾತೆ ಮಾಡಿಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ನಿವೃತ್ತ ಶಿಕ್ಷಕ ಗುರಪ್ಪ ಮಾತನಾಡಿ, ಗ್ರಾಪಂ ಅಧ್ಯಕ್ಷರು ಅಭಿವೃದ್ಧಿಗೆ ಒತ್ತು ನೀಡಬೇಕು. ಆದರೆ, ತಮ್ಮ ಅಧಿಕಾರವನ್ನು ಪುತ್ರನಿಗೆ ಕೊಟ್ಟು ಸರ್ಕಾರದ ಆಸ್ತಿ ಗುಳುಂ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಸಂತೆ ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ಜಾಗ ಮೀಸಲಿಟ್ಟಿದೆ. ಅಧ್ಯಕ್ಷರ ಕುಟುಂಬದವರು ವಂಚನೆ ಮಾಡಿದ್ದಾರೆ. ಹಾಗಾಗಿ, ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪಿಡಿಒ ರಾಘವೇಂದ್ರ ಮಾತನಾಡಿ, ಕಳೆದ ಆರು ತಿಂಗಳಿಂದ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇ- ಸ್ವತ್ತು ಆಗಿ ವರ್ಷಗಳಾಗಿವೆ. ಆಸ್ತಿಯ ದಾಖಲೆ ಪರಿಶೀಲಿಸಲಾಗುವುದು. ತಪ್ಪಾಗಿದ್ದಾರೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬಾಲರಾಜ್, ಮುಕುಂದ, ಬಿ.ಟಿ. ವೆಂಕಟೇಶ್, ಮಾರಕ್ಕ ಹನುಮಂತಪ್ಪ, ಮುಖಂಡರಾದ ಧರ್ಮನಾಯ್ಕ, ಯು.ಸಿ. ರವಿಕುಮಾರ್, ರುದ್ರೇಶ್, ಕೆ.ಇ. ವೀರೇಶ್, ಸಣ್ಣಕಾಟಪ್ಪ, ತಿಮ್ಮಪ್ಪ, ಎನ್. ರಾಜಪ್ಪ ಮತ್ತಿತರರಿದ್ದರು