ರೈತರ ಹಿತ ಮರೆತ ಕಾಂಗ್ರೆಸ್ ಸರ್ಕಾರ ಬಿ.ವೈ. ವಿಜಯೇಂದ್ರ ಕಿಡಿ

1000462071_20241026213857881.jpg
Published on

ದಾವಣಗೆರೆ: ಮಳೆ ಅನಾಹುತಕ್ಕೆ ಸಿಲುಕಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರಾಜ್ಯದ ರೈತರ ಹಿತ ಕಾಯಬೇಕಿದ್ದ ಕಾಂಗ್ರೆಸ್ ಸರ್ಕಾರ ಚುನಾವಣೆ ರಾಜಕಾರಣದಲ್ಲಿ ಮುಳುಗಿ ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ.
ಸಂಡೂರಿನಿಂದ- ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಕೋಡಿಬಿದ್ದ ಜಗಳೂರು ಕೆರೆ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ರಾಜ್ಯ ಸರ್ಕಾರ ಅನ್ನದಾತರ ಹಿತ ಬಲಿ ಕೊಡುತ್ತಿದೆ ಎಂದು ಆಕ್ಷೇಪಿಸಿದರು.
ಫಸಲಿಗೆ ಬಂದ ಮೆಕ್ಕೆಜೋಳ, ಹತ್ತಿ, ರಾಗಿ, ಶೇಂಗಾ, ಈರುಳ್ಳಿ, ಭತ್ತದ ಬೆಳೆಗಳು ಧಾರಾಕಾರ ಮಳೆಗೆ ನಾಶವಾಗಿವೆ. ಕಟಾವು ಹಂತದಲ್ಲಿದ್ದ ಬೆಳೆ ಕೊಳೆಯಲಾರಂಭಿಸಿದೆ. ದಿಕ್ಕು ತೋಚದಂತಾಗಿರುವ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.  ಬೆಳೆ ಸಾಲ ಕೂಡ ಅವರನ್ನು ಬಾಧಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ರೈತರನ್ನು ಭೇಟಿ ಮಾಡುವ ಸೌಜನ್ಯ ತೋರಿಸುತ್ತಿಲ್ಲ. ರಾಜ್ಯದಲ್ಲಿ ಒಂದು ರೀತಿ ಅಭಿವೃದ್ದಿ ಶೂನ್ಯ ಸರ್ಕಾರ ಇರುವುದು ದುರ್ದೈವ ಎಂದು ಟೀಕಿಸಿದರು.
ಮಳೆ ಬಾಧಿತ ಗ್ರಾಮೀಣ ಪ್ರದೇಗಳಿಗೆ ತೆರಳಿ ಎಂದು ಸಚಿವರು-ಶಾಸಕರಿಗೆ ಸೂಚನೆ ಕೊಡುವ ಬದಲು ಮೂರು ಕ್ಷೇತ್ರಗಳ ಉಪ ಚುನಾವಣೆಯತ್ತ ಮುಖ ಮಾಡಿ ಎಂದು ಸೂಚಿಸಿರುವುದು ಯಾವ ನ್ಯಾಯ ಎಂದು  ಪ್ರಶ್ನಿಸಿದರು.
 ಮೂರೂ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್‌ಡಿಎ (ಜೆಡಿಎಸ್,ಬಿಜೆಪಿ ) ಅಭ್ಯ ರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ಸಮಸ್ಯೆ ಪರಿಹರಿಸುವೆ
ದಾವಣಗೆರೆಯಲ್ಲಿ ಬಿಜೆಪಿ ಬೇರುಗಳು  ಬಲಿಷ್ಠವಾಗಿವೆ. ಪಕ್ಷದಲ್ಲಿ ತಲೆದೋರಿರುವ ಸಮಸ್ಯೆಯನ್ನು  ನಾನೇ ಪರಿಹರಿಸುವೆ  ಎಂದು ವಿಜಯೇಂದ್ರ ತಿಳಿಸಿದರು.
ದಾವಣಗೆರೆ ಬಿಜೆಪಿಯಲ್ಲಿ ಎರಡು ಬಣಗಳಾಗಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿರುತ್ತವೆ. ಜಿಲ್ಲೆಯ ನಾಯಕರ ಜತೆ ಕುಳಿತು ಮಾತನಾಡಿ  ಪರಿಹರಿಸುತ್ತೇನೆ ಎಂದರು.
ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ಪ್ರಯತ್ನದ ಮೂಲಕ ಸಂಘಟನೆ  ಬಲಪಡಿಸುವೆ. ಇದರೊಟ್ಟಿಗೆ ಬಿಜೆಪಿಯ ಕಾರ್ಯಕರ್ತರ ಹಿತ ರಕ್ಷಣೆಗೆ ಕಟಿಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್, ಪ.ಪಂ ಅಧ್ಯಕ್ಷ ನವೀನ್‌ಕುಮಾರ್, ಸದಸ್ಯರಾದ ಆರ್. ತಿಪ್ಪೇಸ್ವಾಮಿ, ಮುಖಂಡರಾದ ಬಿಸ್ತುವಳ್ಳಿ ಬಾಬು, ಮರುಳಾರಾಧ್ಯ, ಬಾಣೇಶ್, ಲ್ಯಾಬ್ ಶಿವು, ರಘು ಜಾಗ್ವಾರ್, ಪೂಜಾರಿ ಸಿದ್ದಪ್ಪ, ಮಂಜುನಾಥ್, ಬಿ.ಲೋಕೇಶ್ ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net