ಅಕ್ಷರ ರೂಪಕ್ಕಿಳಿಯಿತು ಯುವಜನರ ಅಭಿವೃದ್ಧಿಯ ಕನಸು

davanagere essay competition
Published on

ದಾವಣಗೆರೆ: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24*7 ವತಿಯಿಂದ, ಲಯನ್ಸ್ ಕ್ಲಬ್ ದಾವಣಗೆರೆ ಸಹಕಾರದೊಂದಿಗೆ ಸ್ವಾತಂತ್ರೃದ ಅಮೃತ ಮಹೋತ್ಸವ ಅಂಗವಾಗಿ ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ 220 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಭವಿಷ್ಯದ ಭಾರತ ಹೇಗಿರಬೇಕು ಎನ್ನುವ ಕುರಿತು ತಮ್ಮ ವಿಚಾರಗಳನ್ನು ಅಕ್ಷರ ರೂಪಕ್ಕಿಳಿಸಿದರು.

ಇಂದಿನ ಯುವ ಪೀಳಿಗೆ ಬರವಣಿಗೆಯನ್ನೇ ಮರೆತಿದೆ ಎಂಬ ಮಾತು ಸುಳ್ಳಾಗಿಸುವ ರೀತಿಯಲ್ಲಿ ವಿವಿಧ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಆಸಕ್ತಿಯಿಂದ ಪ್ರಬಂಧ ಬರೆದರು. ಭಾರತ ಸ್ವಾತಂತ್ರೃದ ಶತಮಾನೋತ್ಸವದ ಹೊತ್ತಿಗೆ (2047) ದೇಶ ಸಾಧಿಸಬೇಕಿರುವುದೇನು ಎಂಬ ಬಗ್ಗೆ ತಮಗೆ ತೋಚಿದಷ್ಟನ್ನು ಪ್ರಾಮಾಣಿಕವಾಗಿ ಬರೆದರು. ರಾಷ್ಟ್ರದ ಮುಂದಿರುವ ಸವಾಲುಗಳೇನು, ಅವುಗಳನ್ನು ಎದುರಿಸಿ ಹೇಗೆ ಮುಂದೆ ಸಾಗಬೇಕು ಎಂಬ ಚಿಂತನೆ ಅವರ ಬರವಣಿಗೆಯಲ್ಲಿತ್ತು.

ಎ.ಆರ್.ಜಿ. ಕಾಲೇಜಿನ 4 ತರಗತಿ ಕೊಠಡಿಗಳು ಸ್ಪರ್ಧಿಗಳಿಂದ ತುಂಬಿದ್ದವು. ಅದರಲ್ಲೂ ವಿದ್ಯಾರ್ಥಿನಿಯರ ಸಂಖ್ಯೆ ಜಾಸ್ತಿಯಿತ್ತು. ಬೆಳಗ್ಗೆ 11 ಗಂಟೆಗೆ ಪ್ರಬಂಧ ಸ್ಪರ್ಧೆ ಆರಂಭವಾಯಿತಾದರೂ 10 ಗಂಟೆಯಿಂದಲೇ ವಿದ್ಯಾರ್ಥಿಗಳು ಬರತೊಡಗಿದರು. ಅವರ ಬ್ಯಾಗ್, ಮೊಬೈಲ್‌ಗಳನ್ನು ಹೊರಗೆ ಇರಿಸಲಾಗಿತ್ತು.

ಹೊಸದಾಗಿ ಕಾಲೇಜು ಮೆಟ್ಟಿಲು ಏರಿರುವ ಪಿಯುಸಿ ವಿದ್ಯಾರ್ಥಿಗಳಿಂದ ಹಿಡಿದು, ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ ಮುಂತಾದ ಪದವಿ ಕೋರ್ಸ್ ಮಾಡುತ್ತಿರುವವರು, ಎಂ.ಎಸ್.ಡಬ್ಲು, ಎಂ.ಕಾಂ. ನಂಥ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರು, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಡಿಪ್ಲೊಮಾದಂಥ ತಾಂತ್ರಿಕ ಶಿಕ್ಷಣ ಪಡೆಯುವವರೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕಾಲೇಜಿನ ಸಿಬ್ಬಂದಿ ಡೆಸ್ಕ್‌ಗಳ ಮೇಲೆ ಸಂಖ್ಯೆಗಳನ್ನು ನಮೂದಿಸಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು. ಮೊದಲಿಗೆ ಎಲ್ಲರ ಹೆಸರು, ತರಗತಿ, ಕಾಲೇಜು, ಮೊಬೈಲ್ ಸಂಖ್ಯೆ ವಿವರಗಳನ್ನು ಪಡೆದು ನೋಂದಣಿ ಮಾಡಿಕೊಳ್ಳಲಾಯಿತು. ನಂತರ ಅವರಿಗೆ ಎ 4 ಅಳತೆಯ ಜೋಡಿ ಹಾಳೆಯನ್ನು ನೀಡಲಾಯಿತು. ಕೊಠಡಿ ಮೇಲ್ವಿಚಾರಕರು ಸ್ಪರ್ಧೆಯ ನಿಯಮಗಳ ಬಗ್ಗೆ ಮೊದಲೇ ಮಾಹಿತಿ ಒದಗಿಸಿದರು. ಯಾವುದೇ ಇಲಾಖೆಯವರು ನಡೆಸುವ ಪರೀಕ್ಷೆಗೂ ಕಡಿಮೆ ಇಲ್ಲದಂತೆ ಶಿಸ್ತುಬದ್ಧವಾಗಿ ಸ್ಪರ್ಧೆ ನಡೆಸಲಾಯಿತು.

ಎ.ಆರ್.ಜಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್. ಬಸವರಾಜಪ್ಪ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಜೆ. ಅನಿತಾಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಪ್ಪೇಸ್ವಾಮಿ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಪ್ರೊ. ಪಿ. ರಶ್ಮಿ, ಪದವಿಪೂರ್ವ ಕಾಲೇಜು ಉಪನ್ಯಾಸಕ ಬಸವರಾಜ, ಅತಿಥಿ ಉಪನ್ಯಾಸಕರಾದ ಶೈಲಜಾ, ಪ್ರದೀಪ್, ಗ್ರಂಥಪಾಲಕ ಚಮನ್‌ಸಾಬ್ ನೆರವಾದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಕಣವಿ ನಟರಾಜ, ಜಿಲ್ಲಾ ಕೋ ಆರ್ಡಿನೇಟರ್ ದೇವರಮನೆ ನಾಗರಾಜ್ ಇದ್ದರು.

ದೇಶದ ಜನಸಂಖ್ಯೆಯ ಶೇ. 50 ರಷ್ಟು ಯುವಜನರೇ ಇದ್ದಾರೆ. ಅವರಿಗೆ ದೇಶದ ಬಗ್ಗೆ ಅಭಿಮಾನ ಮೂಡಬೇಕು, ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಅರಿವು ಮೂಡಬೇಕು. ಯುವಕರು ಮುಂದೆ ಬರದಿದ್ದರೆ ಇನ್ನೂ 75 ವರ್ಷ ಕಳೆದರೂ ಭಾರತದ ಅಭಿವೃದ್ಧಿ ಆಗುವುದಿಲ್ಲ. ಟೇಕೋಜಿ ಎ.ಆರ್.ಜಿ. ಕಾಲೇಜು ವಿದ್ಯಾರ್ಥಿ
ಹಳ್ಳಿಗಳು ಹೆಚ್ಚಾಗಿರುವ ಭಾರತದಲ್ಲಿ ಅನಕ್ಷರತೆ ಸಮಸ್ಯೆಯಿದೆ. ಶಿಕ್ಷಣದಿಂದ ಆ ಕೊರತೆ ನೀಗಿಸಬೇಕಿದೆ. ವಿದ್ಯೆಗೆ ತಕ್ಕ ಕೆಲಸ ಸಿಗುವಂತಾಗಬೇಕು. ಇಲ್ಲಿ ಕಲಿತವರು ವಿದೇಶಗಳಿಗೆ ಹಾರದೇ ನಮ್ಮ ದೇಶದಲ್ಲೇ ಕೆಲಸ ಮಾಡಬೇಕು. ನಾವೆಲ್ಲ ಸ್ವದೇಶಿ ವಸ್ತುಗಳನ್ನು ಬಳಸಬೇಕು. ವರ್ಷಾ ಎ.ಆರ್.ಜಿ. ಕಾಲೇಜು ವಿದ್ಯಾರ್ಥಿನಿ
ದೇಶದ ಅಭಿವೃದ್ಧಿಗೆ ಯುವ ಪೀಳಿಗೆಯ ಕೊಡುಗೆ ಏನು ಎನ್ನುವುದನ್ನು ಇಂತಹ ಸ್ಪರ್ಧೆಗಳಿಂದ ತಿಳಿದುಕೊಳ್ಳಬಹುದಾಗಿದೆ. ಈ ತರಹದ ಕಾರ್ಯಕ್ರಮಗಳು ಮತ್ತಷ್ಟು ನಡೆಯುವ ಮೂಲಕ ಯುವ ಸಮೂಹವನ್ನು ಸರಿದಾರಿಗೆ ತರುವ ಅಗತ್ಯವಿದೆ. ಬಸವರಾಜ್ ಸರ್ಕಾರಿ ಜಿಎಫ್‌ಜಿಸಿ ಕಾಲೇಜು
ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮೂಹ ವಾಟ್ಸ್ ಆ್ಯಪ್, ಫೇಸ್‌ಬುಕ್ ಹಿಂದೆ ಓಡುತ್ತಿದೆ. ದೇಶವನ್ನು ಪ್ರಗತಿಪರ ಚಟುವಟಿಕೆಗಳತ್ತ ಹೇಗೆ ನಡೆಸಬೇಕು ಎನ್ನುವ ಯೋಚನೆಯಿಂದ ಯುವ ಜನತೆ ಹಿಂದೆ ಬಿದ್ದಿದ್ದಾರೆ. ಇಂತಹ ಸ್ಪರ್ಧೆಗಳನ್ನು ಹೆಚ್ಚು ನಡೆಸುವ ಮೂಲಕ ಯುವ ಪೀಳಿಗೆಯನ್ನು ಎಚ್ಚರಿಸಬೇಕಿದೆ. ದಿವ್ಯಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net